Friday, April 4, 2025
Google search engine

Homeರಾಜ್ಯವಾಯು ಮಾಲಿನ್ಯ ನಿಯಂತ್ರಿಸಲು ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ಅನುಮತಿ ಸೂಕ್ತ: ದಿನೇಶ್ ಗುಂಡೂರಾವ್

ವಾಯು ಮಾಲಿನ್ಯ ನಿಯಂತ್ರಿಸಲು ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ಅನುಮತಿ ಸೂಕ್ತ: ದಿನೇಶ್ ಗುಂಡೂರಾವ್

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ನಿಯಂತ್ರಿಸಲು ಸಾರ್ವಜನಿಕ ಸಾರಿಗೆ ಬಳಕೆ ಪ್ರೋತ್ಸಾಹಿಸುವುದರ ಜೊತೆಗೆ ಭವಿಷ್ಯದಲ್ಲಿ ವಿದ್ಯುತ್‌ ಚಾಲಿತ ವಾಹನಗಳಿಗೆ (ಇವಿ) ಮಾತ್ರ ಅನುಮತಿ ನೀಡುವುದು ಸೂಕ್ತ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದಿರುವ ಸಚಿವ ದಿನೇಶ್ ಗುಂಡೂರಾವ್, ಸಾಂಪ್ರದಾಯಿಕ ಇಂಧನ ಬಳಸುವ ವಾಹನಗಳಿಂದ ವಾಯು ಮಾಲಿನ್ಯ ಹೆಚ್ಚುತ್ತಿದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಂತಹ ಮಹಾನಗರಗಳಲ್ಲಿ ಅಧಿಕ ಸಂಖ್ಯೆಯಲ್ಲಿ ವಾಹನಗಳಿರುವುದರಿಂದ ಮಾಲಿನ್ಯದ ಪ್ರಮಾಣವು ಅಗಾಧವಾಗಿದೆ. ನಗರದ ಜನ ಸಾಂದ್ರತೆಯೂ ಹೆಚ್ಚಾಗಿರುವ ಕಾರಣ ಮಾಲಿನ್ಯ ಹೆಚ್ಚು ಜನರನ್ನು ಬಾಧಿಸುತ್ತಿದೆ. ವಾಯು ಮಾಲಿನ್ಯದಿಂದ ನವದೆಹಲಿಯಂತೆ ಬೆಂಗಳೂರು ನಗರ ಸಹ ಕುಖ್ಯಾತಗೊಳ್ಳುವ ಪೂರ್ವದಲ್ಲಿಯೇ ನಾವು ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ.

ಪರಿಸರದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳನ್ನು ಮಿತಿಗೊಳಿಸುವ ನಿಟ್ಟಿನಲ್ಲಿ, ವಾಯು ಮಾಲಿನ್ಯವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಿದೆ. ಸರ್ಕಾರವು ಈ ಬಗ್ಗೆ ಉತ್ತರದಾಯಿತ್ವ ಹೊಂದಿದೆ. ಆದ್ದರಿಂದ ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಿಸುವುದು ಅತ್ಯಗತ್ಯವಾಗಿದೆ. ಇದರ ಜೊತೆಯಲ್ಲೇ ನಗರದಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ನಗರದಲ್ಲಿ ಭವಿಷ್ಯದ ದಿನಗಳಲ್ಲಿ ವಿದ್ಯುತ್ ಚಾಲಿತ ಆಟೊ ರಿಕ್ಷಾಗಳು, ಕ್ಯಾಬ್‌ಗಳು, ಸರಕು ಆಟೋಗಳು ಹಾಗೂ ಘನತ್ಯಾಜ್ಯ ಸಂಗ್ರಹಣೆ ವಾಹನಗಳಿಗೆ ಮಾತ್ರ ಅನುಮತಿ ನೀಡುವುದು ಸೂಕ್ತ. ಇದಕ್ಕೆ ಪೂರಕವಾಗಿ ಇನ್ನು ಮುಂದೆ ನಗರ ಸಾರಿಗೆ ಬಸ್‌ಗಳನ್ನು ಖರೀದಿಸುವಾಗ ಸಹ ಎಲೆಕ್ಟ್ರಿಕ್ ಬಸ್‌ಗಳನ್ನು ಮಾತ್ರ ಸಾರಿಗೆ ಸೇವೆಗೆ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular