ಮೈಸೂರು: ವಿದ್ಯೆಯೊಂದಿಗೆ ಮಾನವೀಯ ಮೌಲ್ಯಗಳು ಕೂಡ ಮುಖ್ಯ. ಮಾನವೀಯತೆ ಇಲ್ಲದ ವಿದ್ಯೆ ಮೌಢ್ಯಕ್ಕೆ ಸಮ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷ ಡಾ.ಬಿ.ಎನ್.ನಂದಿನಿ ಹೇಳಿದರು.
ನಗರದ ಎಂ.ಎಂ.ಕೆ. ಮತ್ತು ಎಸ್‌ಡಿಎಂ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶೈಕ್ಷಣಿಕ ಪ್ರಗತಿಯೊಂದಿಗೆ ಆರ್ಥಿಕ ಬೆಳವಣಿಗೆಯೂ ಮುಖ್ಯವಾಗುತ್ತದೆ. ಆತ್ಮಸಾಕ್ಷಾತ್ಕಾರವೇ ಶಿಕ್ಷಣ. ಒಂದು ಹೆಣ್ಣು ಕಲಿತರೆ ಶಾಲೆಯೇ ತೆರೆದಂತೆ ಎಂಬ ನಾಣ್ಣುಡಿ ಕಲಿಕೆಯ ಮಹತ್ವವನ್ನು ತಿಳಿಸುತ್ತದೆ ಎಂದರು. ವಿದ್ಯೆಯ ಹಂಬಲಕ್ಕೆ ಮೊಬೈಲ್, ಟಿವಿ, ಮಾಧ್ಯಮಗಳಿಂದ ದೂರವಿರುವುದು ಅಗತ್ಯ. ಆಧುನೀಕರಣ, ನಗರೀಕರಣದಿಂದ ಆಗುವ ದುಷ್ಟಪರಿಣಾಮದ ಬಗ್ಗೆ ತಿಳಿಸಿದ ಅವರು, ವಿದ್ಯಾರ್ಥಿಗಳನ್ನು ಜಾಗೃತರಾಗಬೇಕು ಎಂದು ಸಲಹೆ ನೀಡಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಮರಿಸ್ವಾಮಿ ಮಾತನಾಡಿ, ಪಿಯುಸಿಯ ಹಂತ ವಿದ್ಯಾರ್ಥಿಗಳ ಅತ್ಯುನ್ನತ ಉತ್ತಮ ಹಂತ. ಕಲಿಕೆಯ ಪ್ರಾಮುಖ್ಯತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು. ವಿದೇಶಗಳಲ್ಲಿನ ಶಿಕ್ಷಣದ ಪದ್ದತಿ ಬಗ್ಗೆ ತಿಳಿಸುತ್ತಾ, ಸ್ವದೇಶಿ ಹಾಗೂ ವಿದೇಶಿ ಕಲಿಕೆ ವ್ಯತ್ಯಾಸ ತಿಳಿಸಿದರು.
ವಿದೇಶದಲ್ಲಿ ಶಿಕ್ಷಣದ ಮೌಲ್ಯದ ಜೊತೆಗೆ ಮಾನವೀಯ ಮೌಲ್ಯ, ದೇಶಪ್ರೇಮ, ವಿದ್ಯಾರ್ಥಿಗಳ ಕೊಡುಗೆ, ಪಾತ್ರಗಳ ಬಗ್ಗೆ ತಿಳಿಸಿಕೊಡುತ್ತಾರೆ. ನಮ್ಮ ದೇಶದಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರದ ಮೌಲ್ಯವನ್ನು ತಿಳಿಸಿಕೊಡಲಾಗುತ್ತದೆ. ಗುರುಹಿರಿಯರ ಗೌರವವನ್ನು ನಮ್ಮ ದೇಶದಲ್ಲಿ ವಿದ್ಯೆಯೊಂದಿಗೆ ಕಲಿಸಲಾಗುತ್ತದೆ. ಇಂದಿನ ಯುಗ ಮಾಧ್ಯಮದ ಯುಗ. ಮಾಧ್ಯಮಗಳ ಬಳಕೆಯ ದುಷ್ಪರಿಣಾಮ ತಿಳಿಸಿ, ದೇಶಪ್ರೇಮ, ದೇಶಕ್ಕಾಗಿ ಹೊರಾಡಿದ ಸ್ವಾತಂತ್ರ್ಯ ಹೋರಾಟಗಾರರ ಪುಸ್ತಕಗಳನ್ನು ಓದುವ ಬಗ್ಗೆ ತಿಳಿಸಿದರು. ಪ್ರಾಂಶುಪಾಲ ನಯನಕುಮಾರಿ ಕಾಲೇಜಿನ ವಾರ್ಷಿಕ ವರದಿ ಮಂಡಿಸಿದರು. ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಸಿ.ಜಯಲಕ್ಷ್ಮಿ ಇತರರಿದ್ದರು.