ಚಾಮರಾಜನಗರ: ಮಾಜಿ ರಾಜ್ಯಪಾಲರು, ಸಚಿವರು ಆಗಿದ್ದ ಆಲೂರು ಬಿ ರಾಜಯ್ಯನವರು ಕರ್ನಾಟಕದ ಇತಿಹಾಸದಲ್ಲಿ ಕಳಂಕ ರಹಿತ ರಾಜಕೀಯ ಜೀವನ ನಡೆಸಿದ ಶ್ರೇಷ್ಠರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರು ಆದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಬಿ ರಾಚಯ್ಯನವರ 101ನೇ ಜನ್ಮದಿನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಧಿಕಾರದಲ್ಲಿದ್ದಾಗ ಅಹಂಕಾರದಿಂದ ವರ್ತಿಸದೆ, ಜನಸಾಮಾನ್ಯರಿಗೆ ಸರ್ವ ರೀತಿಯಲ್ಲಿಯೂ ಸೇವೆಯನ್ನು ಸಲ್ಲಿಸಿದ ಮಹಾನ್ ವ್ಯಕ್ತಿ. ಜಿಲ್ಲೆಯ ನೀರಾವರಿ, ಶಿಕ್ಷಣ, ನೂತನ ಗ್ರಾಮಗಳ ನಿರ್ಮಾಣ, ಬಡವರಿಗೆ ಉದ್ಯೋಗ, ಭೂಮಿ ಮತ್ತು ವಸತಿ ನೀಡುವ ಮೂಲಕ ಅಮರರಾಗಿದ್ದಾರೆ. ರಾಜ್ಯಪಾಲರಾದಂತಹ ಹುದ್ದೆಯನ್ನು ಅಲಂಕರಿಸಿದ ಚಾಮರಾಜನಗರದ ರಾಜಕೀಯ ರತ್ನ ಬಿ ರಾಜಯ್ಯನವರು ಎಂದರು.

ಅವರ ಪ್ರೀತಿ, ವಿಶ್ವಾಸ, ಗೌರವ, ಅಹಂಕಾರವಿಲ್ಲದ ಬದುಕು, ಸೇವಾಗುಣ ,ಸರಳತೆ , ದ್ವೇಷವಿಲ್ಲದ ರಾಜಕಾರಣ, ಸಜ್ಜನಿಕೆ, ಸರ್ವರನ್ನು ಗೌರವಿಸುವ ಮನೋಭಾವ ಅವರನ್ನು ಬಹಳ ಎತ್ತರಕ್ಕೆ ಕೊಂಡೊಯಿತು . ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ರಾಚಯ್ಯನವರ ಜೀವನ ಮತ್ತು ಬದುಕು ಸರ್ವರಿಗೂ ಆದರ್ಶ ಪ್ರಾಯವಾದದ್ದು. ರಾಜಕಾರಣ ಮತ್ತು ಅಧಿಕಾರವನ್ನು ಸಮಾಜದ ಹಾಗೂ ನಾಡಿನ ಅಭಿವೃದ್ಧಿಗೆ ರಾಜ ನೀತಿಯ ಮೂಲಕ ಅಭಿವೃದ್ಧಿಪಡಿಸಿದ ಮಹಾನ್ ವ್ಯಕ್ತಿ ಎಂದರು.
ಉದ್ಘಾಟನೆಯನ್ನು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಮುಖರಾದ ಕೆಂಪನಪುರ ನಾಗರಾಜು ರವರು ರಾಚಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಅರ್ಪಿಸುವ ಮೂಲಕ ನೆರವೇರಿಸಿ ರಾಚಯ್ಯನವರು ಕಾಲೇಜುಗಳ ಸ್ಥಾಪನೆ ಸಾವಿರಾರು ಯುವಕರಿಗೆ ಉದ್ಯೋಗ ನೀಡುವಂತೆ ಮಾಡಿದ ಮಹಾಪುರುಷರು. ಟಿಸಿಎಚ್ ಕಾಲೇಜ್, ಸಿಪಿಎಡ್ ಕಾಲೇಜ್, ಸರ್ಕಾರಿ ಪಾಲಿಟೆಕ್ನಿಕ್ ಸ್ಥಾಪನೆಯ ಮೂಲಕ ಹಿಂದುಳಿದ ಗಡಿ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಮಹಾನ್ ವ್ಯಕ್ತಿ. ಅವರ ಜನ್ಮದಿನದಂದು ರಾಚಯ್ಯನವರ ಜೀವನ ಸಾಧನೆಯ ಬಗ್ಗೆ ಕಾರ್ಯಕ್ರಮ ರೂಪಿಸಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಋಗ್ವೇದಿ ಹಾಗೂ ಎಲ್ಲಾ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು .
ರಾಚಯ್ಯನವರ ಜೀವನ ಮತ್ತು ಸಾಧನೆ ಕುರಿತು ಮಾತನಾಡಿದ ಸಾಹಿತಿ ದೊಡ್ಡರಾಯಪೇಟೆ ಸಿದ್ದರಾಜು ಮಾತನಾಡಿ, ಬಿ ರಾಚಯ್ಯ ಚಾಮರಾಜನಗರ ಜಿಲ್ಲೆಯ ಆಲೂರು ಗ್ರಾಮದವರು. ರಾಜಕೀಯ ಪ್ರವೇಶ ಮಾಡಿ ಶಾಸಕರಾಗಿ ,ಮಂತ್ರಿಯಾಗಿ, ರಾಜ್ಯಪಾಲ ಹುದ್ದೆಯನ್ನು ಅಲಂಕರಿಸಿ ಬಹುತೇಕ ಎಲ್ಲಾ ಖಾತೆಗಳನ್ನು ಜವಾಬ್ದಾರಿಯಿಂದ ನಿರ್ವಹಣೆ ಮಾಡಿದ ಮಹಾ ಶ್ರೇಷ್ಠ ಪ್ರಮಾಣಿಕ ವ್ಯಕ್ತಿ.. ದೂರದೃಷ್ಟಿಯ ಮೂಲಕ ಚಾಮರಾಜನಗರದ ಅಣೆಕಟ್ಟುಗಳ ನಿರ್ಮಾಣ, ಕಾಲವೇಗಳ ನಿರ್ಮಾಣ, ಕಾಲೇಜುಗಳ ಸ್ಥಾಪನೆ ಮೂಲಕ ಬಡವರ ಕಲ್ಯಾಣ ಯೋಜನೆಗಳನ್ನು ರೂಪಿಸಿದ ವ್ಯಕ್ತಿಯಾಗಿ ಶುದ್ಧ ಪ್ರಾಮಾಣಿಕ ವ್ಯಕ್ತಿಯಾಗಿ ತಮ್ಮ ಬದುಕನ್ನು ರೂಪಿಸಿ ಆದರ್ಶ ವ್ಯಕ್ತಿ ಯಾಗಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ರವಿಚಂದ್ರ ಪ್ರಸಾದ್ ರವರು ರಾಚಯ್ಯನವರ ಜಿಲ್ಲೆಗೆ ನೀಡಿದ ಕೊಡುಗೆಗಳ ಬಗ್ಗೆ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಹಾಗೂ ಗಾಯಕರಾದ ಕಲೆ ನಟರಾಜು ರಾಚಯ್ಯನವರ ಕುರಿತು ಸ್ವರಚಿತ ಕವಿತೆ ಹಾಗೂ ಗಾಯನ ನೆರವೇರಿಸಿ ಸರ್ವರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಆರ್ ವಿ ಮಹದೇವಪ್ಪ, ನಿರ್ದೇಶಕರಾದ ಸರಸ್ವತಿ, ನಿವೃತ್ತ ಪೊಲೀಸ್ ಅಧಿಕಾರಿ ಸಿದ್ದರಾಜು, ಕಲಾವಿದ ರಾಮಣ್ಣ ,ಸಿರಿಗನ್ನಡ ಗೋವಿಂದರಾಜು ಮುಂತಾದವರು ಉಪಸ್ಥಿತರಿದ್ದರು.