ಪಿರಿಯಾಪಟ್ಟಣ: ಅಮರಶಿಲ್ಪಿ ಜಕಣಾಚಾರ್ಯರ ಶಿಲ್ಪ ಕಲೆಗಳು ಕರ್ನಾಟಕ ಸಾಮ್ರಾಜ್ಯಕ್ಕೆ ಹೊನ್ನ ಕಲಶವಿದ್ದಂತೆ ಎಂದು ಸೋಮವಾರಪೇಟೆಯ ಶಿಲ್ಪ ಕಲಾವಿದ ಹಾಗೂ ಕಲಾಶ್ರೀ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಂಜುನಾಥ್ ಆಚಾರ್ಯ ತಿಳಿಸಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ತಾಲೂಕು ವಿಶ್ವಕರ್ಮ ಸೇವಾ ಸಮಾಜ ಸಹಕಾರದಲ್ಲಿ ಪಟ್ಟಣದ ಡಿ.ದೇವರಾಜ ಅರಸು ಕಲಾಭವನದಲ್ಲಿ ನಡೆದ ಶ್ರೀ ಅಮರಶಿಲ್ಪಿ ಜಕಣಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಅವರು ಮಾತನಾಡಿದರು.

ಯಾವುದೇ ಮಹನೀಯರ ಸಂಸ್ಮರಣ ದಿನ ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು ನಮ್ಮ ಹಕ್ಕುಗಳನ್ನು ಪಡೆಯಲು ಎಲ್ಲರೂ ಧ್ವನಿಯಾಗಬೇಕು, ಹಲವು ಜನಪರ ಕೆಲಸಗಳನ್ನು ಮಾಡುವ ಮೂಲಕ ಎಲ್ಲರೂ ಸಂಘಟಿತರಾಗಬೇಕು ಅಮರ ಶಿಲ್ಪಿ ಜಕಣಚಾರಿ ಅವರು ಹೊಯ್ಸಳ ಪರಂಪರೆಯನ್ನು ಜಗತ್ತಿಗೆ ಸಾರಿದ ಏಕೈಕ ಕಲಾವಿದರು, ಬೇಲೂರಿನ ಚನ್ನಕೇಶ ದೇವಾಲಯ ಇವರ ಕಲಾಕೃತಿಗೆ ಕೈಗನ್ನಡಿ, ಶಿಲ್ಪಿಯಾದವರು ಎಲ್ಲಾ ವಿದ್ಯೆಗಳನ್ನು ಸಂಪೂರ್ಣವಾಗಿ ಮೈಗೂಡಿಸಿಕೊಂಡಿರಬೇಕು ಅಂತವರು ಮಾತ್ರ ಶೇಷ್ಟ ಕಲೆಗಾರನಗಲು ಸಾಧ್ಯ, ಶಿಲ್ಪಕಲೆಯನ್ನು ದೇಶಕ್ಕೆ ಪರಿಚಯಿಸಲು ಶಿಲ್ಪಕಲಾ ವಿಶ್ವವಿದ್ಯಾನಿಲಯಗಳ ಸ್ಥಾಪನೆಯಾಗಬೇಕು ಆ ಮೂಲಕ ವಿಶ್ವಕರ್ಮರ ಕಲೆಯನ್ನು ಜಗತ್ತಿಗೆ ತಿಳಿಸಲು ಸಾಧ್ಯವಾಗುತ್ತದೆ ಎಂದರು.
ವಿಶ್ವಕರ್ಮ ಸಮಾಜದ ತಾಲೂಕು ಕಾರ್ಯದರ್ಶಿ ಹಿರಣ್ಣಯ್ಯ ಅವರು ಮಾತನಾಡಿ ದೇಶಕ್ಕೆ ಪಂಚ ಕಸುಬುಗಳ ಮೂಲಕ ಸ್ಮರಣೀಯ ಕೊಡುಗೆ ನೀಡಿದವರು ವಿಶ್ವಕರ್ಮ ಜನಾಂಗದವರು ಆದರೆ ಸರ್ಕಾರಿ ಸವಲತ್ತುಗಳಿಂದ ವಂಚಿತರಾಗುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ ನಾವೆಲ್ಲರೂ ಜಾಗೃತರಾಗಿ ನಮ್ಮ ಹಕ್ಕು ಹಾಗೂ ಸವಲತ್ತು ಪಡೆಯಲು ಸಂಘಟಿತರಾಗಬೇಕಿದೆ ಎಂದರು.
ತಾಲೂಕು ವಿಶ್ವಕರ್ಮ ಸೇವಾ ಸಮಾಜ ಅಧ್ಯಕ್ಷ ಮಹೇಶ್ ಆಚಾರ್ ಅವರು ಮಾತನಾಡಿ ಅಮರಶಿಲ್ಪಿ ಜಕಣಾಚಾರಿ ಅವರು ರೂಪಿಸಿದ ಅದ್ಭುತ ಕಲಾಕೃತಿಗಳು ಇಂದಿಗೂ ನಮ್ಮನ್ನು ಬೆರಗುಗೊಳಿಸುತ್ತವೆ ಇಂತಹ ಕಲೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ, ವಿಶ್ವ ಶ್ರೇಷ್ಠ ದೇವಾಲಯ ಹಾಗೂ ಕಲಾಕೃತಿಗಳನ್ನು ನಿರ್ಮಿಸಿದ ವಿಶ್ವಕರ್ಮರ ಸಾಧನೆ ಸ್ಮರಣೀಯ ಎಂದರು.

ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಡಿ.ಬಿ ಸುನಿಲ್ ಕುಮಾರ್ ಅವರು ಮಾತನಾಡಿ ಸಂತ ಮಹನೀಯರನ್ನು ಸ್ಮರಣೆ ಮಾಡಿದರಷ್ಟೇ ಸಾಲದು ಅವರ ಗುಣ ಜೀವನ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಪರಿಪೂರ್ಣ ಜೀವನ ನಡೆಸಬಹುದು ಎಂದರು.
ವಿಶ್ವಕರ್ಮ ಜನಾಂಗದವರೇ ಆದ ಹುಣಸೂರಿನ ಆರ್ಕೆಸ್ಟ್ರಾ ಕಲಾವಿದ ಶ್ರೀನಿವಾಸ್ ತಂಡ ನಡೆಸಿಕೊಟ್ಟ ವಿಶ್ವಕರ್ಮ ಜನಾಂಗಕ್ಕೆ ಸೇರಿದ ಗೀತೆ ಚಲನಚಿತ್ರ ಗೀತೆಗಳನ್ನು ಹಾಡಿದ್ದು ಪ್ರೇಕ್ಷಕರನ್ನು ರಂಜಿಸಿತು.
ಅಧಿಕಾರಿಗಳು ಗೈರು: ತಾಲೂಕು ಆಡಳಿತ ನೇತೃತ್ವ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆಯುವ ಜಯಂತಿ ಕಾರ್ಯಕ್ರಮಗಳಿಗೆ ಸಚಿವರಾದ ಕೆ.ವೆಂಕಟೇಶ್ ಅವರು ಆಗಮಿಸುತ್ತಾರೆ ಎಂದರೆ ಎಲ್ಲ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಖುದ್ದು ಹಾಜರಿರುತ್ತಾರೆ ಆದರೆ ನಿನ್ನೆ ನಡೆದ ಅಮರಶಿಲ್ಪಿ ಜಕಣಾಚಾರಿ ಅವರ ಸಂಸ್ಮರಣೆ ದಿನದಂದು ಶಿರಸ್ತೇದಾರ್ ಗಳಾದ ಶಕೀಲಾ ಬಾನು, ವಿನೋದ್ ಕುಮಾರ್, ಉಪ ತಹಸಿಲ್ದಾರ್ ಶಶಿಧರ್, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಆಹಾರ ಶಿರಸ್ತೇದಾರ್ ಸಣ್ಣಸ್ವಾಮಿ, ನಿರೀಕ್ಷಕ ಮಂಜುನಾಥ್, ಸಬ್ ಇನ್ಸ್ಪೆಕ್ಟರ್ ಸುರೇಶ್ ಸೇರಿದಂತೆ ಕೆಲ ಗ್ರಾಮ ಲೆಕ್ಕಿಗರನ್ನು ಹೊರತುಪಡಿಸಿ ಬೇರೆ ಯಾವುದೇ ಇಲಾಖೆ ಮೇಲಧಿಕಾರಿಗಳು ಕಾರ್ಯಕ್ರಮಕ್ಕೆ ಆಗಮಿಸಲಿರಲಿಲ್ಲ ಅವರ ಅನುಪಸ್ಥಿತಿಯಲ್ಲಿ ತಮ್ಮ ಇಲಾಖೆ ಅಧಿಕಾರಿಗಳನ್ನು ಸಹ ಕಾರ್ಯಕ್ರಮಕ್ಕೆ ಕಳಿಸದೆ ನಿರ್ಲಕ್ಷತನ ತೋರಿದ್ದು ಎದ್ದು ಕಾಣುತ್ತಿತ್ತು ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಾದ ಕಾರ್ಯಕ್ರಮ 1 ಗಂಟೆ ತಡವಾಗಿ 12 ಗಂಟೆಗೆ ಆರಂಭವಾಯಿತು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ರವಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ, ವಿಶ್ವಕರ್ಮ ಸಮಾಜ ತಾಲೂಕು ಗೌರವಾಧ್ಯಕ್ಷ ಅಣ್ಣಯ್ಯಚಾರ್, ಉಪಾಧ್ಯಕ್ಷ ತಿರುನೀಲಕಂಠ, ಪ್ರಧಾನ ಕಾರ್ಯದರ್ಶಿ ಜಗದೀಶ್, ಖಜಾಂಜಿ ಯೋಗೇಶ್, ಸಂಘಟನಾ ಕಾರ್ಯದರ್ಶಿ ಗಣೇಶ್, ಮಹಿಳಾ ಸಮಾಜ ಅಧ್ಯಕ್ಷೆ ಭಾಗ್ಯಮ್ಮ, ನೌಕರ ಸಂಘದ ಅಧ್ಯಕ್ಷ ನಟೇಶ್, ಸದಸ್ಯರಾದ ರಾಮಾಚಾರಿ, ಮಹೇಶ್ , ಸದಾಶಿವ್ ಕಂಪಲಾಪುರ, ಲೋಕಪಾಲಯ್ಯ , ಪ್ರಕಾಶ್ ಆಚಾರ್, ಮನು, ಶಿಕ್ಷಕ ಮಹದೇವ್, ಸೋಮಶೇಖರ್, ರುಕ್ಮಂಗದಾಚಾರ್, ಚಂದ್ರಶೇಖರ್, ವಿಶ್ವೇಶ್ವರಾಚಾರ್ ಹಾಗು ಸಮುದಾಯದ ಮುಖಂಡರು ಇದ್ದರು.