ಮೈಸೂರು: ಜನಪರ ಹೋರಾಟಗಾರ, ಅಂಬೇಡ್ಕರ್ ವಾದಿ, ವಿಚಾರವಾದಿ, ಕ್ರಾಂತಿಕಾರಿ ಮಂಟೇಲಿಂಗಯ್ಯ (75) ಹೃದಯಾಘಾತದಿಂದ ಸೋಮವಾರ ನಿಧನರಾದರು. ಅವರಿಗೆ ಪತ್ನಿ, ಮೂವರು ಪುತ್ರಿಯರು ಇದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ಅವರು ಕೆಸರೆಯಲ್ಲಿ ನೆಲೆಗೊಂಡಿದ್ದರು. ಕೆಸರೆಯಲ್ಲಿನ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ ಗಾಂಧಿನಗರದ ರುದ್ರಭೂಮಿಯಲ್ಲಿ ನಡೆಯಲಿದೆ.
ಬಡಜನರ ಪರ ಕಾಳಜಿ ಹೊಂದಿದ್ದ ಅವರು, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ಮಾಡಿದವರಲ್ಲಿ ಮುಂಚೂಣಿಗರು.
ಸದಾ ಕಾಲ ನೊಂದ ಜನರ ಸಂಕಷ್ಟಕ್ಕೆ ಮಿಡಿಯುತ್ತಿದ್ದ ಅವರು, ಎಜೆಎಂಎಸ್ ಸಂಘಟನೆ ಹುಟ್ಟು ಹಾಕಿ ಜನಪರ ಚಳವಳಿಯಲ್ಲಿ ಸಕ್ರಿಯರಾಗಿದ್ದರು.
ಬಡ ಜನರ ಬಗ್ಗೆ ಅವರಿಗಿದ್ದ ಕಾಳಜಿ ಎಷ್ಟಿತ್ತೆಂದರೆ ಮೈಸೂರು ದಸರಾಕ್ಕೆ ಪ್ರತಿಯಾಗಿ ಬಡವರ ದಸರಾವನ್ನು ಅದ್ಧೂರಿಯಾಗಿ ಆಚರಿಸಿ ರಾಜ್ಯದ ಗಮನ ಸೆಳೆದಿದ್ದರು.ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿದ್ದ ಅವರು, ಅಂಬೇಡ್ಕರ್ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ಸದಾ ಕಾಲ ತಲುಪಿಸುತ್ತಿದ್ದರು. ಬಹುಜನ ಚಳವಳಿಯನ್ನು ಕನ್ನಡ ನಾಡಿಗೆ ಪರಿಚಯಿಸಿದ್ದ ಅವರು, ಬಹುಜನ ಸಮಾಜ ಪಕ್ಷವನ್ನು ಕರ್ನಾಟಕಕ್ಕೆ ತಂದಿದ್ದರು.
ಸಚಿವ ಮಹಾದೇವಪ್ಪ ಭೇಟಿ: ತಮ್ಮ ಮನೆಯಲ್ಲಿದ್ದ ಮಂಟೇಲಿಂಗಯ್ಯ ಅವರು ಸುಸ್ತು ಎಂದಾಗ ನಗರದ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಕೊನೆಯುಸಿರೆಳೆದರು. ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹಾದೇವಪ್ಪ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.