ಮೈಸೂರು: ಡಾ. ಬಿ.ಆರ್. ಅಂಬೇಡ್ಕರ್ ರವರು ಆಧುನಿಕ ಭಾರತದ ಶಿಲ್ಪಿಯಾಗಿ ಸಂವಿಧಾನದಲ್ಲಿ ದೇಶದ ಪ್ರಜೆಗಳಿಗೆ ಸಾಮಾಜಿಕ ನ್ಯಾಯ ಸಮಾನತೆ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ನೀಡಿ ಜನರು ನೆಮ್ಮದಿಯಾಗಿರುವಂತೆ ಮಾಡಿದ್ದಾರೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಭಾರ್ ನಿರ್ದೇಶಕರಾದ ಕೆ.ಎಂ. ಸುರೇಶ್‌ಕುಮಾರ್ ತಿಳಿಸಿದರು.
ನಜರ್‌ಬಾದ್‌ನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್‌ರವರು ಜಯಂತಿ ಹಾಗೂ ವಿದ್ಯಾರ್ಥಿನಿಲಯದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾನು ೧೯೮೩ರಲ್ಲಿ ವಿದ್ಯಾರ್ಥಿಯಾಗಿದ್ದೆ. ನಮಗೆ ಆಗ, ಈಗಿರುವ ಸೌಲಭ್ಯಗಳು ಇರಲಿಲ್ಲ. ಸರ್ಕಾರ ನಿಮಗೆ ಎಲ್ಲಾ ಸೌಲಭ್ಯಗಳನ್ನು ನೀಡಿದೆ, ಆದ್ದರಿಂದ ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು. ಅಂಬೇಡ್ಕರ್‌ರವರು ಚೆನ್ನಾಗಿ ಓದಿದ್ದರಿಂದಲೇ ೨೧ನೇ ಶತಮಾನದಲ್ಲಿ ಜ್ಞಾನದ ಸಂಕೇತವಾಗಿ ವಿಶ್ವಜ್ಞಾನಿ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿದೆ. ಸಮಾಜ ಕಲ್ಯಾಣ ಇಲಾಖೆ ಸಂವಿಧಾನದ ಮಹತ್ವವನ್ನು ತಿಳಿಸಿಕೊಟ್ಟಿದೆ. ವಿದ್ಯಾರ್ಥಿಗಳು ಗುಣ ಮಟ್ಟದ ಶಿಕ್ಷಣವನ್ನು ಪಡೆಯುವುದರೊಂದಿಗೆ ಗುಣಾತ್ಮಕವಾದ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು.
ಅಂಬೇಡ್ಕರ್ ದಿನಕ್ಕೆ ೧೮ಗಂಟೆ ಓದುತ್ತಿದ್ದರು. ನೀವು ಸಹ ಇದನ್ನು ರೂಡಿಸಿಕೊಳ್ಳುವುದರೊಂದಿಗೆ ಅವರ ಜೀವನ ಶೈಲಿಯನ್ನು ಅಂತರಂಗದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಜಪಮಾಡಿದರೆ ಆಗುವುದಿಲ್ಲ. ಗುರಿ ಇಟ್ಟುಕೊಂಡು ಶ್ರಮದಿಂದ ಸಾಧನೆ ಮಾಡಬೇಕು. ಗ್ರಾಮೀಣ ಭಾಗದಿಂದ ಬಂದಿರುವ ನೀವು ಪಟ್ಟಣದ ಮಕ್ಕಳಿಗಿಂತ ಕಡಿಮೆಯೇನಿಲ್ಲ. ಸಮಯವನ್ನು ವ್ಯರ್ಥ ಮಾಡಬೇಡಿ ಸಂವಿಧಾನ ನಮಗೆ ಎಲ್ಲವನ್ನು ಕೊಟ್ಟಿದೆ, ಆದರೆ ನಾವು ದೇಶಕ್ಕೆ ಏನು ಕೊಟ್ಟಿದ್ದೇವೆ ಎಂದು ಚಿಂತನೆ ಮಾಡಿ ಚೆನ್ನಾಗಿ ಓದಿ ರಾಷ್ಟ್ರಕ್ಕೆ ಉತ್ತಮ ಪ್ರಜೆಗಳಾಗಿ ಎಂದ ಅವರು ಎಸ್.ಎಸ್.ಎಲ್.ಸಿ ನಂತರ ಯಾವ, ಯಾವ ಕೋರ್ಸ್‌ಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಸಹಾಯಕ ನಿರ್ದೇಶಕ ಕೆ.ಸಿದ್ದಲಿಂಗು, ಸರ್ಕಾರಿ ವಿಭಜಿತ ಮಹಾರಾಜ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರ ರಮೇಶ್, ನಿಲಯ ಪಾಲಕರಾದ ಮಹಂತೇಶ್ ಮಾಟೋಳಿ, ಎಸ್.ಜಿ. ಮಹೇಶ್, ಸುಧಾ ಹಾಗೂ ಎಲ್ಲಾ ನಿಲಯಪಾಲಕರು ಹಾಜರಿದ್ದರು.