ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸ್ವಾತಂತ್ರ್ಯಯ, ಸಮಾನತೆ ಮತ್ತು ಭಾತೃತ್ವದ ಭಾವನೆಗಳನ್ನು ಎತ್ತಿಹಿಡಿದು ಅವುಗಳನ್ನು ಜೀವನದ ತತ್ವಗಳನ್ನಾಗಿ ಅಳವಡಿಸಿಕೊಂಡಲ್ಲಿ ಅಂಬೇಡ್ಕರ್ ಕಂಡ ಸಮ ಸಮಾಜದ, ಸಾಮಾಜಿಕ ಪ್ರಜಾಪ್ರಭುತ್ವದ ಕನಸನ್ನು ನನಸಾಗಿಸಲು ಸಾಧ್ಯವಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದಲ್ಲಿ ತಾಲೂಕು ಆಡಳಿ, ತಾಲೂಕು ಪಂಚಾಯ್ತಿ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ಸಂವಿಧಾನಶಿಲ್ಪಿ, ಮಹಾಮಾನವತಾವಾದಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್‌ರವರ ೧೩೩ನೇ ಜನ್ಮದಿನಾಚರಣೆ ಪ್ರಯುಕ್ತ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ಅಂಬೇಡ್ಕರ್‌ರವರು ರಚಿಸಿದ ಸಂವಿಧಾನ ಭಾರತಕ್ಕಲ್ಲದೇ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಪ್ರೇರಣೆ ಮತ್ತು ಪ್ರಜಾಪ್ರಭುತ್ವವನ್ನು ಅರ್ಥೈಸುವ ಸಾಮರ್ಥ್ಯವನ್ನು ಹೊಂದಿದೆ. ವೈಚಾರಿಕ ಕ್ರಾಂತಿಯ ಚಳುವಳಿ ಇಂದಿನ ನಾಗರೀಕ ಸಮಾಜಕ್ಕೆ ಪ್ರೇರೇಪಣೆ. ಅವರು ತೋರಿದ ಸಾಮಾಜಿಕ ಮಾರ್ಗದರ್ಶನಗಳು ಆಧುನಿಕ ಭಾರತದ ನಿರ್ಮಾಣದಲ್ಲಿ ಸಹಕಾರಿಯಾಗುತ್ತವೆ ಎಂದರು.
ಗಣ್ಯ ಮಹನೀಯರ ಜಯಂತಿಗಳನ್ನು ಆಚರಿಸಿದರೆ ಸಾಲದು ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಬೇಕು. ಆಗ ಮಾತ್ರ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದ ಶಾಸಕರು ಮಹನೀಯರು ತೋರಿಸಿಕೊಟ್ಟ ಮಾರ್ಗದಲ್ಲಿ ನಡೆಯುವುದರ ಜತೆಗೆ ಸರ್ವ ಜನಾಂಗದವರು ಒಂದೆಡೆ ಸೇರಿ ಜಯಂತಿಗಳನ್ನು ಆಚರಿಸುವಂತಾಗಬೇಕು ಎಂದು ಸಲಹೆ ನೀಡಿದರು. ಸಮ ಸಮಾಜದ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಹೊತ್ತ ಭಾರತದ ಸಂವಿಧಾನವನ್ನು ಇಂದು ಜಗತ್ತಿನ ಇತರೆ ದೇಶಗಳೂ ಮಾದರಿಯಾಗಿ ಸ್ವೀಕರಿಸಿ ಅನುಸರಿಸುತ್ತಿವೆ. ಮನುಸ್ಮೃತಿ ಬದಿಗಿಟ್ಟು ಅಂಬೇಡ್ಕರ್ ಸ್ಮೃತಿ ಆಧಾರದ ಮೇಲೆ ಆಡಳಿತ ಮತ್ತು ಜೀವನ ನಡೆಸುವ ಸಂಕಲ್ಪತೊಟ್ಟಾಗ ಮಾತ್ರ ಈ ದೇಶದಲ್ಲಿ ಒಗ್ಗಟ್ಟು ಮೂಡಲು ಸಾಧ್ಯ ಎನ್ನುವುದನ್ನು ನಾವೆಲ್ಲರೂ ಮನಗಂಡು ನಡೆಯಬೇಕು ಎಂದು ತಿಳಿಸಿದರು.
ಅಂಬೇಡ್ಕರ್ ದಮನಿತರ ದನಿಯಾಗಿದ್ದ ಶ್ರೇಷ್ಠ ವಿಚಾರವಾದಿ. ಅವರು ಅಭಿವೃದ್ಧಿಯೆಂಬ ಸಾಮಾಜಿಕ ಕಳಕಳಿಯ ಚಕ್ರವನ್ನು ಪ್ರಯೋಗಿಸಿದರು. ಅನ್ನಕ್ಕೆ ಜಾತಿಯಿಲ್ಲ, ಅಂತೆಯೇ ಪ್ರತಿಭೆಗೂ ಜಾತಿಯಿಲ್ಲವೆಂಬುದನ್ನು ಜಗತ್ತಿಗೆ ಸಾರಿ ಹೇಳಿದರು. ಸಾಮಾಜಿಕ ತಾರತಮ್ಯದ ನಿವಾರಣೆಗೆ ಶಿಕ್ಷಣವೇ ಉತ್ತರ ಎಂಬುದು ಅವರ ವೇದವಾಕ್ಯವಾಗಿತ್ತು. ಅಂಬೇಡ್ಕರ್ ಸಂವಿಧಾನ ಮಾನವೀಯ ಮೌಲ್ಯದಿಂದ ಕೂಡಿದೆ ಎಂದು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಶಾಸಕ ಡಿ.ರವಿಶಂಕರ್, ತಾಲೂಕು ಆಡಳಿತ, ತಾಲೂಕು ಎಸ್‌ಸಿ/ಎಸ್‌ಟಿ ನೌಕರರ ಸಂಘ, ತಾಲೂಕು ಅಂಬೇಡ್ಕರ್/ವಾಲ್ಮೀಕಿ ನಿವೃತ್ತ ನೌಕರರ ಸಂಘ, ತಾಲೂಕು ಭೀಮ್ ಆರ್ಮಿ ಸಂಘಟನೆ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ಪ್ರಧಾನ ಭಾಷಣ ನೆರವೇರಿಸಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಿ.ಕೆ.ಹರೀಶ್, ಡಿ.ಕೆ.ಕೊಪ್ಪಲುರಾಜಯ್ಯ, ಎಂ.ಲೋಕೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಂ.ಅಶೋಕ್‌ಕುಮಾರ್ ಮಾತನಾಡಿದರು.
ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ, ಜಿ.ಪಂ. ಮಾಜಿ ಸದಸ್ಯ ರಾಜಯ್ಯ, ತಾ.ಪಂ. ಮಾಜಿ ಅಧ್ಯಕ್ಷ ಎಂ.ಹೆಚ್.ಸ್ವಾಮಿ, ಪುರಸಭೆ ಸದ್ಯಸರಾದ ಕೋಳಿಪ್ರಕಾಶ್, ಮಿಕ್ಸರ್‌ಶಂಕರ್, ಮುಖ್ಯಾಧಿಕಾರಿ ಹೇಮಂತ್, ಬಿಇಒ ಆರ್.ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ನಗರಾಧ್ಯಕ್ಷ ಎಂ.ಜೆ.ರಮೇಶ್, ಎಸ್‌ಸಿ ಘಟಕದ ಅಧ್ಯಕ್ಷ ನಂದೀಶ್, ಎಂಎಸ್‌ಎಸ್ ತಾಲೂಕು ಅಧ್ಯಕ್ಷ ಮಧುವನಹಳ್ಳಿರವಿಕುಮಾರ್, ಭೀಮ್ ಆರ್ಮಿ ಅಧ್ಯಕ್ಷ ಗುರುಸ್ವಾಮಿ, ಮುಖಂಡರಾದ ಗೀತಾಮಹೇಶ್, ಹನಸೋಗೆಸಿದ್ದಯ್ಯ, ಮಂಜುರಾಜ್, ರಾಜಯ್ಯ, ಎ.ಆರ್.ಕಾಂತರಾಜ್, ಚೆಲುವರಾಜ್, ಎಂ.ಎಸ್.ನಂಜುಂಡಸ್ವಾಮಿ, ರಾಜೇಶ್, ಆನಂದ, ರವಿಪೂಜಾರಿ, ಕುಮಾರ್, ಸಿದ್ದಾಪುರರಮೇಶ್, ಡಾ.ಕೃಷ್ಣ, ರಾಜಶೇಖರ್ ಮತ್ತಿತರರು ಹಾಜರಿದ್ದರು.