Sunday, April 20, 2025
Google search engine

Homeರಾಜ್ಯಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಬಹುದೊಡ್ಡ ಕೊಡುಗೆ: ಇಕ್ಬಾಲ್ ಹುಸೇನ್

ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಬಹುದೊಡ್ಡ ಕೊಡುಗೆ: ಇಕ್ಬಾಲ್ ಹುಸೇನ್

ರಾಮನಗರ: ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ಅದರ ಮೌಲ್ಯಗಳು ಮತ್ತು ತತ್ವಗಳನ್ನು ಎತ್ತಿ ಹಿಡಿಯಲು ಈ ದಿನವನ್ನು ರಾಜ್ಯಾದ್ಯಂತ ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ರಾಮನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹೆಚ್.ಎ. ಇಕ್ಬಾಲ್ ಹುಸೇನ್ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಏನೆಲ್ಲಾ ನೋಡಬಹುದು, ಏನೆಲ್ಲಾ ಪಡೆಯಬಹುದು ಹಾಗೂ ಒಬ್ಬ ವ್ಯಕ್ತಿ ಪ್ರಜಾಪ್ರಭುತ್ವದಲ್ಲಿ ಬದುಕಲು ಸಂವಿಧಾನದಲ್ಲಿರುವ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಸಂವಿಧಾನ ಇಲ್ಲದಿದ್ದರೆ ಯಾರೂ ಕೂಡ ಬದುಕಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲರೂ ಸಹ ಸಮಾನವಾಗಿ, ಶಾಂತಿಯಾಗಿ ಬದುಕನ್ನು ಕಟ್ಟಿಕೊಂಡಿದ್ದೇವೆ ಎಂದರೆ ಅದು ಮೂಲತಃ ಸಂವಿಧಾನದಿಂದಲೇ, ಭಾರತ ದೇಶದ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆಲ್ಲರೂ ಸಹ ಹಕ್ಕುಗಳು, ಮೂಲಭೂತ ವ್ಯವಸ್ಥೆಯಲ್ಲಿ ಬದುಕಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನವು ಬಹು ದೊಡ್ಡ ಕೊಡುಗೆಯಾಗಿದೆ ಎಂದರು.


ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲಾ ರೀತಿಯ ಅವಕಾಶಗಳನ್ನು ನೀಡಿದ್ದಾರೆ. ಇತರೆ ದೇಶಗಳು ಭಾರತದ ಸಂವಿಧಾನವನ್ನು ಪ್ರೀತಿಸುತ್ತಾರೆ. ಇತರೆ ದೇಶಗಳಲ್ಲಿ ಇಂದಿಗೂ ಸಹ ರಾಜರುಗಳ ವ್ಯವಸ್ಥೆಯಲ್ಲಿ ಆಳ್ವಿಕೆ ನಡೆಸುತ್ತಿದ್ದಾರೆ. ಇಡೀ ಪ್ರಪಂಚದಲ್ಲೇ ಹೆಮ್ಮೆ ಪಡುವ ಸಂವಿಧಾನವೆಂದರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ನೀಡಿರುವ ಸಂವಿಧಾನದಲ್ಲಿ ಎಲ್ಲರಿಗೂ ಸಹ ಸಮಾನವಾದಂತಹ ಹಕ್ಕು, ಸಮಾನವಾದಂತಹ ಬದುಕನ್ನು ನೀಡಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ಉಚ್ಛ ನ್ಯಾಯಾಲಯದ ವಕೀಲರಾದ ಹೆಚ್. ಮೋಹನ್ ಕುಮಾರ್ ಅವರು ಮಾತನಾಡಿ, ಸುಮಾರು ವರ್ಷಗಳ ನಂತರ ಸಂವಿಧಾನದ ಪೀಠಿಕೆಯನ್ನು ಗ್ರಹಿಸುವ, ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ. ಪ್ರಜಾಪ್ರಭುತ್ವ ಎಂದರೆ ಪ್ರಜೆಗಳು ಮತದಾರರಷ್ಟೆ, ಮತದಾನ ಮಾಡುತ್ತಾರೆ ಆನಂತರ ಮತದಾರರ ಜವಾಬ್ದಾರಿ ಮುಗಿಯುತ್ತದೆ. ೫ ವರ್ಷ ಆಡಳಿತವನ್ನು ನಡೆಸುವವರು ಶಾಸಕರು, ಸಂಸದರು ಅದಕ್ಕೆ ಭಾರತದ ಪ್ರಜಾಪ್ರಭುತ್ವ ಸಂದೀಯ ಪ್ರಜಾಪ್ರಭುತ್ವವಾಗಿದೆ ಎಂದರು.

ಇಂಟರ್ ಪಾರ್ಲಿಮೆಂಟರಿ ಯೂನಿಯನ್ ಪ್ರಕಾರ, ಪ್ರಜಾಪ್ರಭುತ್ವದ ಪ್ರಮುಖ ಅಂಶಗಳಲ್ಲಿ ನಿಯಮಿತ ಮಧ್ಯಂತರಗಳಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವುದು ಮತ್ತು ಜನರು ತಮ್ಮನ್ನು ತಾವು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು.

ಇತರೆ ದೇಶದಲ್ಲಿ ಚುನಾವಣೆಯನ್ನು ಅಧ್ಯಕ್ಷರಿಗೆ ಮಾತ್ರ ಮಾಡುತ್ತಾರೆ. ಅಧ್ಯಕ್ಷರೆ ತಮ್ಮ ಕ್ಯಾಬಿನೆಟ್ ಅನ್ನು ರಚಿಸಿಕೊಳ್ಳುತ್ತಾರೆ. ಆದರೆ ನಮ್ಮ ದೇಶದಲ್ಲಿ ಚುನಾವಣೆ ನಡೆಯುವುದು ಸಂಸದರಿಗೆ. ಈ ದೇಶದ ಪ್ರತಿಯೊಬ್ಬ ಸಂಸದರು ಪ್ರಧಾನ ಮಂತ್ರಿ ಅಥವಾ ಸಚಿವರುಗಳಾಗುವ ಶಕ್ತಿಯುಳ್ಳವರಾಗಿರುತ್ತಾರೆ. ಆ ಶಕ್ತಿಯನ್ನು ಮತದಾರರು ಕೊಡುತ್ತಾರೆ ಇದು ನಮ್ಮ ಭಾರತದ ಸುಂದರವಾದ ಪ್ರಜಾಪ್ರಭುತ್ವ ಎಂದರು.
ನಾವು ಸಂವಿಧಾನಾತ್ಮಕವಾಗಿ ಬದುಕಬೇಕು, ನಮ್ಮ ದಿನಚರಿ ಸಂವಿಧಾನಾತ್ಮಕವಾಗಿರಬೇಕು. ನಾವು ಎಲ್ಲರನ್ನೂ ಸಹ ಗೌರವಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಅವರು ಸಂವಿಧಾನ ಪೀಠಿಕೆಯ ಅರ್ಥವನ್ನು ಸಂಪೂರ್ಣವಾಗಿ ವಿವರಿಸಿ, ಸಂವಿಧಾನದ ಮಹತ್ವವನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ರಾಮನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹೆಚ್.ಎ. ಇಕ್ಬಾಲ್ ಹುಸೇನ್ ಅವರು ಭಾರತ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ವಿಜಯ ಕುಮಾರಿ, ಉಪಾಧ್ಯಕ್ಷರಾದ ಸೋಮಶೇಖರ್ (ಮಣಿ), ನಗರಸಭೆ ಸ್ಥಾಯಿ ಸಮಿತಿ ಸದಸ್ಯರಾದ ಹಜಾಮತ್ ಉಲ್ಲಾಖಾನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಕುಮಾರ್, ಉಪ ವಿಭಾಗಾಧಿಕಾರಿ ಬಿನೋಯ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶಾಂತಿಪ್ರಿಯ,ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular