ಮಂಗಳೂರು (ದಕ್ಷಿಣ ಕನ್ನಡ): ವೈದ್ಯರು, ನರ್ಸ್, ವೈದ್ಯಕೀಯ ಸಿಬ್ಬಂದಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕಾಯ್ದೆಯಲ್ಲಿ ತಿದ್ದುಪಡಿ ತರಲಾಗಿದ್ದು, ರಾಜ್ಯಪಾಲರ ಅಂಕಿತ ಬಾಕಿ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋಲ್ಕತ್ತದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಆತಂಕ ವ್ಯಕ್ತಪಡಿಸಿದರು. ವೈದ್ಯರು ಮತ್ತು ಇತರ ಸಿಬ್ಬಂದಿ ರಾತ್ರಿಯಿಡೀ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಿಳಾ ಸಿಬ್ಬಂದಿಯು ಸಹ ಈ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ. ನಾನು ಮಂಗಳವಾರ ಸುರಕ್ಷತೆ ಕುರಿತಾದ ಕ್ರಮಗಳನ್ನು ಚರ್ಚಿಸಲು ಎಲ್ಲಾ ವೈದ್ಯರು ಮತ್ತು ಆಸ್ಪತ್ರೆ ಮಾಲೀಕರ ಸಭೆ ಕರೆದಿದ್ದೇನೆ ಎಂದು ಅವರು ಹೇಳಿದರು.
ಇವತ್ತು ತುರ್ತು ಸೇವೆಗಳು ಎಲ್ಲಾ ಆಸ್ಪತ್ರೆಗಳಲ್ಲಿ ಲಭ್ಯವಿದ್ದು, ಓಪಿಡಿ ಮಾತ್ರ ಬಂದ್ ಆಗಿರುತ್ತದೆ. ಆದರೆ ಅಗತ್ಯ ಸೇವೆಗಳು ಮುಂದುವರಿಯುತ್ತವೆ ಎಂದು ಸ್ಪಷ್ಟನೆ ನೀಡಿದರು. ಇದರಿಂದ್ದ ಸ್ವಲ್ಪ ತೊಂದರೆ ಉಂಟಾಗಬಹುದು, ಆದರೆ ಇದು ನಿರೀಕ್ಷಿತವಾಗಿದೆ ಎಂದು ನಾನು ಹೇಳುತ್ತೇನೆ. ಪ್ರತಿಭಟನೆ ಸರಿಯಲ್ಲ ಎಂದು ನಾನು ಹೇಳುವುದಿಲ್ಲ, ಆದರೆ ಇದು ಒಳ್ಳೆಯ ಉದ್ದೇಶದಿಂದ ನಡೆಯುತ್ತಿದೆ ಎಂದರು.