ನವದೆಹಲಿ: ಭಾರತದ ವಿರುದ್ಧ ಪಾಕಿಸ್ತಾನವನ್ನು ಅಮೆರಿಕ ಶಸ್ತ್ರಾಸ್ತ್ರಗೊಳಿಸುತ್ತಿದ್ದು, ಈ ಹಿಂದೆ ಚೀನಾ ಕೂಡ ಇದೇ ರೀತಿ ಮಾಡಿತ್ತು ಎಂದು ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕನ್ವಾಲ್ ಸಿಬಲ್ ಆರೋಪಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಟ್ವಿಟ್ ಮಾಡಿರುವ ಅವರು, ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿರುವ ಪ್ಯಾಕೇಜ್‌ಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಪಾಕಿಸ್ತಾನದೊಂದಿಗಿನ ರಕ್ಷಣಾ ಸಂಬಂಧಗಳ ಕ್ಷೇತ್ರದಲ್ಲಿ ವಾಷಿಂಗ್ಟನ್ ಗೆ ನವದೆಹಲಿ ಸೂಕ್ತ ಪ್ರತಿಕ್ರಿಯೆಯನ್ನು ನೀಡುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರವು ಪಾಕಿಸ್ತಾನದ ಎಫ್-16 ನೌಕಾಪಡೆಗೆ 686 ಮಿಲಿಯನ್ ಡಾಲರ್ ಅಪ್‌ಗ್ರೇಡ್ ಪ್ಯಾಕೇಜ್ ಅನ್ನು ಘೋಷಿಸಿದೆ. ಇದನ್ನು ಅನೇಕ ಕಾಂಗ್ರೆಸ್ ಶಾಸಕರು ಟೀಕಿಸಿದ್ದು, ಈ ಬಗ್ಗೆ ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕನ್ವಾಲ್ ಸಿಬಲ್ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕವು ಭಾರತದ ವಿರುದ್ಧ ಪಾಕಿಸ್ತಾನವನ್ನು ಶಸ್ತ್ರಾಸ್ತ್ರಗೊಳಿಸುತ್ತಿದೆ. ಕಳೆದ ಫೆಬ್ರವರಿಯಲ್ಲಿ ಪಾಕಿಸ್ತಾನದ ಎಫ್16 ನೌಕಾಪಡೆ ಅಭಿವೃದ್ಧಿಗೆ ಸುಮಾರು 400 ಮಿಲಿಯನ್ ಡಾಲರ್ ಅನ್ನು ಅಮೆರಿಕ ಘೋಷಿಸಿತು. ಅಕ್ಟೋಬರ್ ನಲ್ಲಿ ಅಮೆರಿಕ ಪಾಕಿಸ್ತಾನಕ್ಕೆ ಎಎಂ ಆರ್ ಎಎಎಂ ಕ್ಷಿಪಣಿಗಳನ್ನು ಪೂರೈಸುವುದಾಗಿ ಘೋಷಿಸಿದ್ದು, ಇದೀಗ ಡಿಸೆಂಬರ್ ನಲ್ಲಿ ಅಮೆರಿಕವು ಪಾಕಿಸ್ತಾನಕ್ಕೆ 686 ಮಿಲಿಯನ್ ಎಫ್ 16 ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಚೀನಾ ಕೂಡ ಭಾರತದ ವಿರುದ್ಧ ಪಾಕಿಸ್ತಾನವನ್ನು ಶಸ್ತ್ರಸಜ್ಜಿತಗೊಳಿಸಿತ್ತು. ಈಗ ಅಮೆರಿಕ ಕೂಡ ಇದನ್ನು ಪ್ರಾರಂಭಿಸಿದೆ. ಟ್ರಂಪ್ ಈಗ ಪಾಕಿಸ್ತಾನವನ್ನು ಹೆಚ್ಚಾಗಿ ಮೆಚ್ಚಿಕೊಳ್ಳುತ್ತಿದ್ದಾರೆ. ಹೀಗಾಗಿ ಭಾರತವು ಅಮೆರಿಕ ಜೊತೆಗಿನ ರಕ್ಷಣಾ ಸಂಬಂಧಗಳ ಪ್ರತಿಕ್ರಿಯಿಸಬೇಕಿದೆ ಎಂದು ಹೇಳಿದ್ದಾರೆ.
ಈ ವೇಳೆ ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಅಮೆರಿಕದ ಕಾರ್ಯನಿರ್ವಾಹಕ ನಿರ್ದೇಶಕ ಧ್ರುವ ಜೈಶಂಕರ್ ಪ್ರತಿಕ್ರಿಯಿಸಿ, ಪಾಕಿಸ್ತಾನದೊಂದಿಗಿನ ಅಮೆರಿಕ ಸಂಬಂಧ ಗಾಢವಾಗುತ್ತಿರುವುದು ಭಾರತಕ್ಕೆ ಇರುವ ಪ್ರಮುಖ ಸವಾಲು. ಭಾರತದ ವಿರುದ್ಧ ಭಯೋತ್ಪಾದಕರನ್ನು ಬಳಸುವ ಪಾಕಿಸ್ತಾನ ಇದರ ಸುಧೀರ್ಘ ಇತಿಹಾಸವನ್ನು ಹೊಂದಿದೆ. ಹೀಗಾಗಿ ಈ ಬಗ್ಗೆ ಭಾರತ ಎಚ್ಚರಿಕೆ ವಹಿಸಬೇಕಾಗಿದೆ ಎಂದು ತಿಳಿಸಿದ್ದಾರೆ.



