ನವದೆಹಲಿ: ಎಲ್ಲ ಮುಖ್ಯಮಂತ್ರಿಗಳಿಗೆ ತಮ್ಮ ರಾಜ್ಯಗಳಲ್ಲಿ ವಾಸಿಸುವ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ಅವರನ್ನು ತಮ್ಮ ದೇಶಕ್ಕೆ ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚಿಸಿದ್ದಾರೆಂದು ಮೂಲಗಳ ಪ್ರಕಾರ ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿಯ ನಂತರ, ಏಪ್ರಿಲ್ 27ರಿಂದ ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾದ ಎಲ್ಲಾ ವೀಸಾಗಳನ್ನು ರದ್ದುಗೊಳಿಸುವುದಾಗಿ ಈಗಾಗಲೇ ಭಾರತ ಘೋಷಿಸಿದೆ. ಅದರ ಬೆನ್ನಲ್ಲೇ ಇಂದು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಈ ಸಭೆಯ ಬಳಿಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ರಾಜ್ಯಗಳಲ್ಲಿ ವಾಸಿಸುವ ಪಾಕ್ ಪ್ರಜೆಗಳನ್ನು ಗುರುತಿಸಿ ಅವರನ್ನು ತಮ್ಮ ದೇಶಕ್ಕೆ ವಾಪಸ್ ಕಳುಹಿಸಲು ಕ್ರಮ ತೆಗೆದುಕೊಳ್ಳುವಂತೆ ಅಮಿತ್ ಶಾ ನಿರ್ದೇಶನ ನೀಡಿದ್ದಾರೆ.
ಪಹಲ್ಗಾಮ್ ನಲ್ಲಿ 26 ಪ್ರವಾಸಿಗರನ್ನು ಬಲಿ ತೆಗೆದುಕೊಂಡ ಭಯೋತ್ಪಾದಕ ದಾಳಿಯಿಂದ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಈ ಹಿನ್ನೆಲೆ ಪಾಕಿಸ್ತಾನದಲ್ಲಿ ವಾಸಿಸುವ ಭಾರತೀಯ ಪ್ರಜೆಗಳು ಆದಷ್ಟು ಬೇಗ ಮನೆಗೆ ಮರಳುವಂತೆ ಸಲಹೆ ನೀಡಲಾಗಿದೆ. ವೀಸಾ ರದ್ದತಿಯು ಈಗಾಗಲೇ ಹಿಂದೂ ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾದ ದೀರ್ಘಾವಧಿಯ ವೀಸಾಗಳಿಗೆ ಅನ್ವಯಿಸುವುದಿಲ್ಲ. ಅದು ‘ಮಾನ್ಯವಾಗಿಯೇ ಉಳಿಯಲಿದೆ’ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.