ವಾಷಿಂಗ್ಟನ್: ರೊನಾಲ್ಡ್ ರೇಗನ್ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 64 ಮಂದಿ ಪ್ರಯಾಣಿಕರಿದ್ದ ಅಮೆರಿಕನ್ ಏರ್ ಲೈನ್ಸ್ ವಿಮಾನ ಆಗಸದಲ್ಲೇ ಹೆಲಿಕಾಪ್ಟರ್ ಗೆ ಢಿಕ್ಕಿ ಹೊಡೆದು ಪೊಟೊಮ್ಯಾಕ್ ನದಿಗೆ ಬಿದ್ದಿದೆ ಎಂದು ಯುಎಸ್ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.
ಹೆಲಿಕಾಪ್ಟರ್ ನಲ್ಲಿದ್ದ ಸೈನಿಕರ ಸ್ಥಿತಿ ತಿಳಿದಿಲ್ಲ, ಆದರೆ ಯಾವುದೇ ಹಿರಿಯ ಅಧಿಕಾರಿಗಳು ಹೆಲಿಕಾಪ್ಟರ್ ನಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.
ಟೆಕ್ಸಾಸ್ ನ ಸೆನೆಟರ್ ಟೆಡ್ ಕ್ರೂಜ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ಅವಘಡದಲ್ಲಿ ಸಾವು- ನೋವು ಸಂಭವಿಸಿದೆ. ಆದರೆ ಎಷ್ಟು ಸಾವು ಸಂಭವಿಸಿದೆ ಎಂದು ತಕ್ಷಣಕ್ಕೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ವಿಮಾನದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ 64 ಮಂದಿ ಇದ್ದರು ಎಂದು ತಿಳಿದು ಬಂದಿದೆ. ವಿಮಾನ ನಿಲ್ದಾಣದ ಗಡಿಯಲ್ಲಿರುವ ಪೊಟೊಮ್ಯಾಕ್ ನದಿಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.