ಪಿರಿಯಾಪಟ್ಟಣ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ರೈತಪರ ಯೋಜನೆ ರದ್ದು ಮಾಡಿರುವುದನ್ನು ಖಂಡಿಸಿ ಯೋಜನೆ ಪುನರ್ ಜಾರಿ ಮಾಡುವುದು ಸೇರಿದಂತೆ ರೈತರ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ವತಿಯಿಂದ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು.
ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ.ನವೀನ್ ಕುಮಾರ್ ಅವರು ಮಾತನಾಡಿ ಬಿಜೆಪಿ ಸರ್ಕಾರ ಅವಧಿಯಲ್ಲಿ ರೈತರಿಗಾಗಿ ಜಾರಿಗೆ ತಂದ ಕೃಷಿ ಸುಧಾರಣಾ ಕಾಯ್ದೆ ಎಪಿಎಂಸಿ ಕಾಯ್ದೆ ವಾಪಸ್ ಸೇರಿದಂತೆ ರೈತ ಸಂಬಂಧಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರದ್ದುಗೊಳಿಸಲು ತೀರ್ಮಾನಿಸಿರುವುದು ರೈತ ವಿರೋಧಿ ನಡೆ ತೋರಿಸುತ್ತದೆ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ರೈತರ ಹಿತ ಕಾಪಾಡುತ್ತಿದೆ ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನೀರಾವರಿಗೂ ಹಣವಿಲ್ಲ ಕಿಸಾನ್ ಸಮ್ಮಾನ್ ರೈತ ವಿದ್ಯಾನಿಧಿ ಭೂಸಿರಿ ಸೇರಿ ಅನೇಕ ಯೋಜನೆ ರದ್ದು ಮಾಡಿ ರೈತರ ಬೆನ್ನುಮೂಳೆ ಮುರಿಯಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಜನತೆ ಬೀದಿಗಿಳಿಯಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಎಂ.ಎಂ ರಾಜೇಗೌಡ ಅವರು ಮಾತನಾಡಿ ರೈತರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ನೀಡುತ್ತಿರುವ ಸಹಾಯಧನವನ್ನು ಏರಿಕೆ ಮಾಡುವುದರ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ತಮ್ಮ ರೈತಪರ ನೀತಿ ಪ್ರದರ್ಶಿಸಬೇಕು ಹಾಗೂ ವಿವಿಧ ಯೋಜನೆ ಮತ್ತು ನೀರಾವರಿ ಯೋಜನೆಗಳಿಗೆ ಶೀಘ್ರ ಅನುದಾನ ನೀಡುವ ಮೂಲಕ ರೈತರ ಹಿತ ಕಾಪಾಡಬೇಕು ಎಂದು ಆಗ್ರಹಿಸಿ ತಮಿಳುನಾಡಿಗೆ ಕಾವೇರಿ ನದಿಯಿಂದ ನೀರು ಬಿಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ತಾಲೂಕು ಆಡಳಿತ ಪರವಾಗಿ ಶಿರಸ್ತೆದಾರ್ ಶಕೀಲಾ ಬಾನು ಮನವಿ ಸ್ವೀಕರಿಸಿ ಸರ್ಕಾರಕ್ಕೆ ಸಲ್ಲಿಸುವ ಭರವಸೆ ನೀಡಿದರು.
ಈ ಸಂದರ್ಭ ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಚ್.ಸಿ ವೀರಭಧ್ರ, ಜಿ.ಪಂ ಮಾಜಿ ಸದಸ್ಯ ಪಿ.ರಾಜೇಂದ್ರ, ಮುಖಂಡರಾದ ಆರ್.ಟಿ ಸತೀಶ್, ಲೋಕಪಾಲಯ್ಯ, ವಿಕ್ರಂರಾಜ್, ರವಿ, ಪಿ.ಕೆ ರಾಘವೇಂದ್ರ, ಶುಭಾಗೌಡ, ರಾಜು, ಬಾನು, ರಮೇಶ್, ಚನ್ನಬಸವರಾಜು, ಅನಿಲ್ ಕುಮಾರ್, ಮೋಹನ್, ಶರವಣ, ನಾಗೇಶ್, ಕಿರಣ್, ಮತ್ತು ಕಾರ್ಯಕರ್ತರು ಇದ್ದರು.
