ಮೈಸೂರು:ಮೈಸೂರಿನ ವಿಜಯನಗರ 2ನೇ ಹಂತದ ಅಂಬರೀಷ್ ರಸ್ತೆಯಲ್ಲಿರುವ ನೆರಳು ಬೆಳಕು ಗ್ಯಾಲರಿ – ಕಾಫಿ ಸಿಟಿಯಲ್ಲಿ ಕಲಾವಿದ ಪ್ರವೀಣ್ ಅವರಿಂದ ಚಿತ್ರಕಲಾ ಪ್ರದರ್ಶನವನ್ನ ಏರ್ಪಡಿಸಲಾಗಿದೆ.
ಆ.21ರ ಸೋಮವಾರ ಬೆಳಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮೈಸೂರು ನಗರದ ಉಪ ಪೊಲೀಸ್ ಆಯುಕ್ತರು ಎಂ. ಮುತ್ತುರಾಜ್ ಹಾಗೂ ಸಾಹಿತಿಗಳಾದ ಅಬ್ದುಲ್ ರಶೀದ್ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿನಿಮಾ ನಟರಾದ ರಿತ್ವಿಕ್ ಮಠದ್ ಭಾಗವಹಿಸಲಿದ್ದಾರೆ.
ಕಲಾವಿದ ಆರ್. ಪ್ರವೀಣ್ ಅವರು ಒಬ್ಬ ಪ್ರತಿಭಾನ್ವಿತ ವರ್ಣಚಿತ್ರ ಕಲಾವಿದರಾಗಿದ್ದು ಹಲವಾರು ವರ್ಷಗಳಿಂದ ಕಲಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ದೇಶದ ಪ್ರತಿಷ್ಟಿತ ಗ್ಯಾಲರಿಗಳಲ್ಲಿ ಒಂದಾದ ಮುಂಬಯಿಯ ಜಹಂಗೀರ್ ಆರ್ಟ್ ಗ್ಯಾಲರಿಯಲ್ಲಿ ಚಿತ್ರ ಪ್ರದರ್ಶಿಸಿದ್ದಾರೆ. ಹಲವಾರು ವರ್ಣಚಿತ್ರ ಕಲಾಪ್ರದರ್ಶನಗಳನ್ನು ದೇಶದಾದ್ಯಂತ ಪ್ರದರ್ಶನ ಕಂಡಿವೆ. ಇವರ ವನ್ಯಜೀವಿ ವರ್ಣಚಿತ್ರಗಳು ಅತ್ಯಂತ ಜನಪ್ರಿಯವಾಗಿದ್ದು, ಪರಿಸರ ಮತ್ತು ವನ್ಯಜೀವಿಗಳ ಆಸಕ್ತಿಯು ಕಲಾಮಾದ್ಯಮದ ಮುಂದುವರಿಕೆಯ ಭಾಗವಾಗಿ ಕಾಡಿನ ಅನುಭವ ಇವರ ಕುಂಚದಲ್ಲಿ ಅರಳಿದೆ. ದೇಶದಾದ್ಯಂತ ಸಂಚರಿಸಿ ಕಾಡಿನ ಅನುಭವ ಪಡೆದು ಅದನ್ನು ಬಣ್ಣಗಳಲ್ಲಿ ಮೂಡಿಸುವುದು ಇವರ ವಿಶೇಷ. ಜಲವರ್ಣ ಚಿತ್ರಕಲೆಯು ಅತ್ಯಂತ ಸಂಕೀರ್ಣ ಮಾದ್ಯಮವಾಗಿದ್ದು ಅದರಲ್ಲಿ ಮಾಗಿದ ಅನುಭವವನ್ನು ಹೊಂದಿದ್ದಾರೆ. ತಮ್ಮ ಕಲಾಭ್ಯಾಸದ ಜೊತೆಗೆ ಇನ್ಫೊಸಿಸ್ ಸಂಸ್ಥೆಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿತ್ರಕಲಾ ಪ್ರದರ್ಶನವು ದಿನಾಂಕ 21-08-2023 ರಿಂದ 28-08-2023 ವರೆಗೆ ನೆರಳು ಬೆಳಕು ಗ್ಯಾಲರಿ, ಕಾಫಿ ಸಿಟಿ ಯಲ್ಲಿ ಜರುಗಲಿದೆ.
