ಚಾಮರಾಜನಗರ: ಸ್ವಾತಂತ್ರೋತ್ಸವ ಕುರಿತು ಪ್ರತಿಯೊಬ್ಬರನ್ನು ಜಾಗೃತಗೊಳಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿರುವ ಹರ್ ಘರ್ ತಿರಂಗ ಅಭಿಯಾನದ ಅಂಗವಾಗಿ ನಗರದಲ್ಲಿಂದು ಆಕರ್ಷಕ ಬೈಕ್ ರ್‍ಯಾಲಿ ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿಂದು ೭೮ನೇ ಸ್ವಾತಂತ್ರೋತ್ಸವ ಅಂಗವಾಗಿ ನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಅವರಣದಿಂದ ಜಿಲ್ಲಾಡಳಿತ ಭವನದವರೆಗೆ ಏರ್ಪಡಿಸಲಾಗಿದ್ದ ಬೈಕ್ ರ್‍ಯಾಲಿಗೆ ನಗರಸಭೆ ಪೌರಾಯುಕ್ತರಾದ ಎಸ್.ವಿ. ರಾಮದಾಸ್ ಅವರು ಹಸಿರು ನಿಶಾನೆ ತೋರಿದರು.
ಬಳಿಕ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪೌರಾಯುಕ್ತ ಎಸ್.ವಿ. ರಾಮದಾಸ್ ಅವರು ಸರ್ಕಾರದ ನಿರ್ದೇಶನದ ಮೇರೆಗೆ ಪ್ರತಿಯೊಬ್ಬರಲ್ಲಿಯೂ ಸ್ವಾತಂತ್ರೋತ್ಸವದ ಅರಿವು ಮೂಡಿಸಿ ದೇಶಪ್ರೇಮ ಉತ್ತೇಜಿಸಲು ಆಯೋಜಿಸಲಾಗಿರುವ ಹರ್ ಘರ್ ತಿರಂಗ ಅಭಿಯಾನದಡಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಇಂದು ಬೈಕ್ ರ?ಯಾಲಿಯನ್ನು ಎರ್ಪಡಿಸಲಾಗಿದೆ ಎಂದರು.
ಹರ್ ಘರ್ ತಿರಂಗ ಅಭಿಯಾನದಡಿ ಸ್ವಾತಂತ್ರ್ಯ ದಿನದಂದು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಪ್ರತಿಯೊಬ್ಬ ಸಾರ್ವಜನಿಕರು ತಮ್ಮ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಬೇಕು. ಪ್ಲಾಸ್ಟಿಕ್ ಧ್ವಜ ಬಳಸಬಾರದು, ಬಟ್ಟೆಯಿಂದ ತಯಾರಿಸಿದ ಧ್ವಜಗಳನ್ನೇ ಕಡ್ಡಾಯವಾಗಿ ಬಳಸಬೇಕು. ಧ್ವಜ ತೆರವುಗೊಳಿಸುವ ಸಂಜೆ ಸಮಯದಲ್ಲಿ ಧ್ವಜ ಕೆಳಗೆ ಬೀಳದಂತೆ ಹಾಗೂ ಧ್ವಜಕ್ಕೆ ಯಾವುದೇ ಅಗೌರವ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ರಾಮದಾಸ್ ಅವರು ತಿಳಿಸಿದರು.
ಇದೇ ವೇಳೆ ನಗರಸಭೆ ಎಂಜಿನಿಯರ್ ನಟರಾಜು, ಗಿರಿಜಮ್ಮ, ಯೋಜನಾಧಿಕಾರಿ ವೆಂಕಟನಾಯಕ್, ಕಂದಾಯಾಧಿಕಾರಿ ಶರವಣ, ಹಿರಿಯ ಆರೋಗ್ಯ ನಿರೀಕ್ಷಕರಾದ ಮಂಜುನಾಥ್, ಸುಷ್ಮಾ, ಹಿರಿಯ ಕಾರ್ಯಾಕ್ರಮ ಅಧಿಕಾರಿ ಸಿದ್ದಪ್ಪಾಜಿ, ನಗರಸಭೆ ಸಿಬ್ಬಂದಿ ಇದ್ದರು.
ನಗರದ ಚಾಮರಾಜೇಶ್ವರ ದೇವಾಲಯದಿಂದ ಜೋಡಿರಸ್ತೆಯಲ್ಲಿ ಸಾಗಿದ ಬೈಕ್ ರ್‍ಯಾಲಿಯಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣದ ತ್ರಿವರ್ಣ ಧ್ವಜಗಳು ನೋಡುಗರ ಮನಸೆಳೆದವು. ರ್‍ಯಾಲಿಯು ಜಿಲ್ಲಾಡಳಿತ ಭವನದ ತಲುಪಿದ ಸಂದರ್ಭದಲ್ಲಿ ಪೌರಾಯುಕ್ತರಾದ ಎಸ್.ವಿ. ರಾಮದಾಸ್ ಅವರು ಸ್ವಾತಂತ್ರೋತ್ಸವದ ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಬೈಕ್ ರ್‍ಯಾಲಿಯು ರಾಮಸಮುದ್ರ ತಲುಪಿ ಅಲ್ಲಿಂದ ಪಚ್ಚಪ್ಪ ವೃತ್ತದ ಮೂಲಕ ದೇವಾಲಯದ ಅವರಣದಲ್ಲಿ ಅಂತ್ಯಗೊಂಡಿತು.