ಮಂಡ್ಯ: ಕಾವೇರಿ ವಿಚಾರದಲ್ಲಿ ದೃಢ ನಿರ್ಣಯದ ಅವಶ್ಯಕತೆ ಇದೆ. ಹೀಗಾಗಿ ಸರ್ಕಾರ ರ್ತು ಅಧಿವೇಶನ ಕರೆದು ದೃಢ ನಿರ್ಣಯ ತೆಗೆದುಕೊಳ್ಳಬೇಕೆಂದು ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ಒತ್ತಾಯಿಸಿದರು.
ರೈತ ಹಿತ ರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಬಹಳ ವರ್ಷಗಳಿಂದ ಪಕ್ಷಾತೀತವಾಗಿ ಸಮಿತಿಯ ಹೋರಾಟ ನಡೆಯುತ್ತಿದೆ. ಮುಂದೆಯೂ ಸಮಿತಿ ತೆಗೆದುಕೊಳ್ಳುವ ನಿರ್ಣಯಕ್ಕೆ ನಾವೆಲ್ಲರೂ ಬದ್ಧ ಎಂದು ಹೇಳಿದರು.
ಸರ್ಕಾರ ಸರ್ವ ಪಕ್ಷ ಸಭೆ ನಿಯೋಗವನ್ನ ದೆಹಲಿಗೆ ಕರೆದೊಯ್ಯಬೇಕು. ಈ ಬಗ್ಗೆ ಇಲ್ಲಿನ ಸಂಸದರು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು. ಕೇವಲ ಮಂತ್ರಿ ಭೇಟಿ ಮಾಡಿ, ಪತ್ರ ಕೊಟ್ಟರೆ ಸಾಲದು. ರಾಜ್ಯದ ಎಲ್ಲಾ ಲೋಕಸಭಾ ಸದಸ್ಯರು, ಕೇಂದ್ರ ಸರ್ಕಾರಕ್ಕೆ ಒತ್ತಡ ತರಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಗಳು ನೀರು ಬಿಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಮತ್ತೆ ಹೆಚ್ಚುವರಿ ನೀರನ್ನ ತಮಿಳುನಾಡಿಗೆ ಬಿಡಬಾರದು. ರೈತರ ಮೇಲಿನ ಪರಿಣಾಮದ ಜವಾಬ್ದಾರಿಯನ್ನ ಸರ್ಕಾರ ಹೊರಬೇಕು. ರೈತರ ಪರ ಜಿಲ್ಲಾ ಮಂತ್ರಿ, ಸರ್ಕಾರ ನಿಲ್ಲಬೇಕು ಎಂದು ಆಗ್ರಹಿಸಿದರು.
ರೈತ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲೇ ನಮ್ಮ ಮುಂದಿನ ಹೋರಾಟ. ಇದು ನಮ್ಮ ಪಕ್ಷದ ನಿರ್ಣಯ.
ಮುಂದಿನ ಎಲ್ಲಾ ಕ್ಷಣದಲ್ಲೂ ನಿಮ್ಮ ಪರ ಇರ್ತೇವೆ ಎಂದರು.