ಮಂಗಳೂರು ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ಗೂಂಡಾಗಿರಿ ಪ್ರಕರಣಗಳಿಗೆ ಅವಕಾಶ ಕೊಡಬಾರದು. ಇದು ಜಿಲ್ಲೆಗೆ ಕಳಂಕವಾಗಿದ್ದು, ಹೊರಗಿನವರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಾರೆ. ಜಿಲ್ಲೆಯಲ್ಲಿ ಎಲ್ಲರೂ ಒಂದಾಗಿ ಬೆರೆತು, ಸುರಕ್ಷತೆಯ ವಾತಾವರಣ ಸೃಷ್ಟಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅವರು ಇಂದು ಮಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್, ಬಜರಂಗದಳ ದಂತಹ ಸಂಘಟನೆಗಳ ಪ್ರಚೋದನೆಯಿಂದ ಮತೀಯ ಗೂಂಡಾಗಿರಿ ಪ್ರಕರಣಗಳು ನಡೆಯುತ್ತಿವೆ. ಬಿಜೆಪಿಯ ಕೆಲ ನಾಯಕರಿಗೆ ಇದೇ ಬಂಡವಾಳವಾಗಿದೆ ಎಂದು ಅವರು ಆರೋಪಿಸಿದರು.
ಜಿಲ್ಲೆಯಲ್ಲಿ ಸ್ಥಾಪಿಸಿರುವ ಆ?ಯಂಟಿ ಕಮ್ಯುನಲ್ ವಿಂಗ್ ಸಕ್ರಿಯವಾಗಿ ಕಾರ್ಯಾಚರಿಸುತ್ತಿದ್ದು, ಈಚೆಗಷ್ಟೇ ಮತೀಯ ಗೂಂಡಾಗಿರಿ ನಡೆಸಿದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಉಡುಪಿಯಲ್ಲಿ ನಕ್ಸಲ್ ಚಟುವಟಿಕೆ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲೂ ನಿಗಾವಹಿಸಲಾಗಿದೆ. ಪೊಲೀಸ್ ಇಲಾಖೆಗೆ ಇದನ್ನು ನಿಯಂತ್ರಿಸುವ ಶಕ್ತಿ ಇದೆ ಎಂದರು.