Monday, December 22, 2025
Google search engine

Homeಅಪರಾಧಅಂತರ್ಜಾತಿ ವಿವಾಹವಾಗಿದ್ದಕ್ಕೆ ಹೆತ್ತ ತಂದೆಯಿಂದಲೇ ಕೊಲೆಯಾದ ನತದೃಷ್ಟ ಮಗಳು

ಅಂತರ್ಜಾತಿ ವಿವಾಹವಾಗಿದ್ದಕ್ಕೆ ಹೆತ್ತ ತಂದೆಯಿಂದಲೇ ಕೊಲೆಯಾದ ನತದೃಷ್ಟ ಮಗಳು

ಹುಬ್ಬಳ್ಳಿ : ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಅಂತರ್ಜಾತಿ ವಿವಾಹವಾಗಿದ್ದಕ್ಕೆ ಹೆತ್ತ ತಂದೆಯೇ ಮಗಳನ್ನು ಭೀಕರವಾಗಿ ಕೊಲೆ ಮಾಡಿ ಪೈಶಾಚಿಕ ಕೃತ್ಯ ಮೆರೆದಿದ್ದಾನೆ. ಇನಾಂ ವೀರಾಪುರ ಗ್ರಾಮದ ವಿವೇಕಾನಂದ ಮತ್ತು ಅದೇ ಗ್ರಾಮದ ಮಾನ್ಯಾ ಅನೇಕ ವರ್ಷಗಳ ಕಾಲ ಪ್ರೀತಿಸಿದ್ದರು.

ಮಾನ್ಯ ಖಾಸಗಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದ ಸಮಯದಲ್ಲಿ ವಿವೇಕಾನಂದ ಹುಬ್ಬಳ್ಳಿ ಖಾಸಗಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದ. ಇಬ್ಬರಿಗೂ ಮೊದಲು ಪರಿಚಯವಿತ್ತು. ಆದರೆ, ಡಿಗ್ರಿ ಓದುವಾಗ ಇನ್​ಸ್ಟಾಗ್ರಾಂನಲ್ಲಿ ಮೆಸೆಜ್ ಮಾಡುತ್ತಾ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಇಬ್ಬರು ಪ್ರೀತಿಸುತ್ತಿದ್ದ‌ ವಿಚಾರ ಎರಡು ಮನೆಯವರಿಗೆ ಗೊತ್ತಾಗಿತ್ತು. ಯುವತಿ ಲಿಂಗಾಯತ ಸಮಾಜದವಳಾಗಿದ್ದರೆ ವಿವೇಕಾನಂದ ದಲಿತ ಸಮುದಾಯಕ್ಕೆ ಸೇರಿದ್ದ. ಹೀಗಾಗಿ ಯುವತಿ ಮನೆಯವರು ಮದುವೆಗೆ ವಿರೋಧ ಮಾಡಿದ್ದರು. ಆದರೆ, ಯುವತಿ ಯಾವುದೇ ಕಾರಣಕ್ಕೂ ವಿವೇಕಾನಂದ ಬಿಟ್ಟು ಬದಕೋದಿಲ್ಲಾ ಎಂದು ಹಠ ಹಿಡಿದಿದ್ದಳು.

ಧಾರವಾಡದಲ್ಲಿ ಕೋಚಿಂಗ್​ಗೆ ಹೋಗಿದ್ದ‌ ವಿವೇಕಾನಂದ ಬಳಿ ಹೋಗಿ, ಮದುವೆಯಾಗದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಹೀಗಾಗಿ ವಿವೇಕಾನಂದ ಆಕೆ ಜೊತೆ ಕಳೆದ ಜೂನ್ 19 ರಂದು ಹುಬ್ಬಳ್ಳಿಯಲ್ಲಿ ರಿಜಿಸ್ಟರ್ ವಿವಾಹವಾಗಿದ್ದ.

ರಿಜಿಸ್ಟರ್ ವಿವಾಹದ ನಂತರ ಪೊಲೀಸರು ಎರಡೂ ಕುಟುಂಬಗಳನ್ನು ಕರೆದು ರಾಜಿ ಪಂಚಾಯತಿ ಮಾಡಿದ್ದರು. ಆ ಬಳಿಕ ಮಾನ್ಯಾ ಮತ್ತು ವಿವೇಕಾನಂದ ಊರು ಬಿಟ್ಟು ಹೋಗಿ ಹಾವೇರಿಯಲ್ಲಿ ವಾಸವಾಗಿದ್ದರು. ಈ ನಡುವೆ ಮಾನ್ಯಾ ಗರ್ಭಿಣಿಯಾಗಿದ್ದಾಳೆ. 7 ತಿಂಗಳ ಬಳಿಕ ಎಲ್ಲ ಸರಿಹೋಗಿರಬಹುದು ಎಂದುಕೊಂಡು ಡಿಸೆಂಬರ್ 8 ರಂದು ಇಬ್ಬರೂ ಸ್ವಗ್ರಾಮಕ್ಕೆ ವಾಪಸ್ ಆಗಿದ್ದಾರೆ. ಆದರೆ, ಮತ್ತೆ ಕಿರಿಕ್ ಶುರುವಾಗಿ ಗ್ರಾಮೀಣ ಠಾಣೆ ಪೊಲೀಸರು ಎರಡು ಕಡೆಯವರನ್ನೂ ಕರೆಸಿ, ರಾಜಿ ಸಂದಾನ ಮಾಡಿಸಿದ್ದಾರೆ. ಆದರೆ ಇದಾದ ಎರಡೇ ವಾರಕ್ಕೆ ನಡೆಯಬಾರದ್ದು ನಡೆದುಹೋಗಿದೆ.

ಭಾನುವಾರ ಸಂಜೆ ಮತ್ತೆ ವಿವೇಕಾನಂದ ಮನೆ ಮೇಲೆ ದಾಳಿ ಮಾಡಿದ ಮಾನ್ಯ ತಂದೆ ಪ್ರಕಾಶಗೌಡ ಪಾಟೀಲ್ ಮತ್ತು ಸಂಬಂಧಿಗಳು ಮಾನ್ಯಾ ಮತ್ತು ಮನೆಯಲ್ಲಿದ್ದ ಆಕೆಯ ಅತ್ತೆ ಸೇರಿದಂತೆ ಮೂ‌ವರ ಮೇಲೆ ಹಲ್ಲೆ ಮಾಡಿದ್ದಾರೆ. ಮಾನ್ಯಳಿಗೆ ಪೈಪ್ ಮತ್ತು ಗುದ್ದಲಿಯಿಂದ ಪ್ರಕಾಶಗೌಡ ಹಲ್ಲೆ ಮಾಡಿದ್ದಾನೆ. ನಂತರ ಮಾನ್ಯಾಳನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಾನ್ಯಾ ಇಹಲೋಕ ತ್ಯಜಿಸಿದ್ದಾಳೆ. ಇತ್ತ ಮಾನ್ಯಾಳ ಅತ್ತೆ, ಮಾವ ಸೇರಿ ಮೂವರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಧಾರವಾಡ ಎಸ್​​ಪಿ ಗುಂಜನ್ ಆರ್ಯ, ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಮಾನ್ಯಾಳ ಕೊಲೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಾನ್ಯಾಳ ತಂದೆ ಪ್ರಕಾಶಗೌಡ ಪಾಟೀಲ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಆದರೆ ಪ್ರೀತಿಸಿ ಮದುವೆಯಾಗಿ ತನ್ನ ಪಾಡಿಗೆ ತಾನು ಜೀವನ ಕಟ್ಟಿಕೊಂಡಿದ್ದ ಮಗಳನ್ನು ಸ್ವಂತ ತಂದೆಯೇ ಮರ್ಯಾದಾ ಹತ್ಯೆ ಮಾಡಿದ್ದು ಮಾತ್ರ ದುರ್ದೈವದ ಸಂಗತಿಯಾಗಿದೆ.

RELATED ARTICLES
- Advertisment -
Google search engine

Most Popular