ಆಂಧ್ರಪ್ರದೇಶ: ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಹತ್ತಾರು ಸಾವು – ನೋವುಗಳಿಂದ ತತ್ತರಿಸಿರುವ ಆಂಧ್ರ ಪ್ರದೇಶ – ತೆಲಂಗಾಣದ ನೆರವಿಗೆ ಸೆಲೆಬ್ರಿಟಿಗಳು ಕೈಜೋಡಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಆಂಧ್ರ ಮತ್ತು ತೆಲಂಗಾಣದಲ್ಲಿ ಭಾರೀ ಮಳೆ ಉಂಟಾಗುತ್ತಿದ್ದು, ಪರಿಣಾಮ ಪ್ರವಾಹ ಹರಿದು ಹಲವು ಮನೆಗಳು ನೀರುಪಾಲಾಗಿದೆ. ನೂರಾರು ಮಂದಿ ದಿಕ್ಕಪಾಲಾಗಿ ಮನೆ- ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ.
ಮನೆ ಹಾಗೂ ತನ್ನವರನ್ನು ಕಳೆದುಕೊಂಡಿರುವ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಹಲವು ಗಣ್ಯರು ಹಣಕಾಸಿನ ಸಹಾಯವನ್ನು ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಆರ್ಥಿಕ ನೆರವನ್ನು ನೀಡುತ್ತಿದ್ದಾರೆ.
ಜೂ.ಎನ್ ಟಿಆರ್ ಅವರು ʼಎಕ್ಸ್ʼ ಖಾತೆಯಲ್ಲಿ “ಇತ್ತೀಚೆಗೆ ಎರಡು ತೆಲುಗು ರಾಜ್ಯಗಳಲ್ಲಿ ಭಾರೀ ಮಳೆಯಿಂದಾಗಿ ಸಂಭವಿಸಿದ ಪ್ರವಾಹದಿಂದ ನಾನು ತೀವ್ರವಾಗಿ ನೊಂದಿದ್ದೇನೆ. ತೆಲುಗು ಜನರು ಈ ವಿಪತ್ತಿನಿಂದ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಕಡೆಯಿಂದ ನಾನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 50 ಲಕ್ಷ ರೂ.ಪರಿಹಾರವನ್ನು ನೀಡುತ್ತಿದ್ದೇನೆ” ಎಂದು ಬರೆದಿದ್ದಾರೆ.
ಇತ್ತ ‘ಕಲ್ಕಿ 2898 ಎ.ಡಿʼ ಸಿನಿಮಾದ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ 25 ಲಕ್ಷ ರೂ. ಪರಿಹಾರವನ್ನು ಪ್ರವಾಹ ಪೀಡಿತ ರಾಜ್ಯಕ್ಕೆ ನೀಡಿರುವುದಾಗಿ ಸೋಶಿಯಲ್ ಮೀಡಿಯಾ ಖಾತೆಯಲ್ಲಿನ ಪೋಸ್ಟ್ ಮೂಲಕ ಹೇಳಿದೆ.