ಆನೇಕಲ್: ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟ ಆಗಿರುವ ಪರಿಣಾಮ ಮೂವರು ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಕಾಚನಾಯಕನಹಳ್ಳಿಯಲ್ಲಿ ನಡೆದಿದೆ.
ಇಂದು (ಡಿ.02) ಬೆಳ್ಳಂಬೆಳಿಗ್ಗೆ ಸಿಲಿಂಡರ್ ಸ್ಫೋಟ ಆಗಿದ್ದು, ಅಸ್ಸಾಂ ಮೂಲದ ಬಿದನ್ ದಾಸ್, ದಯಾಲ್ ಶಾಂತಿ ಹಾಗೂ ಗುಲಾಭ ಕರ್ಮಾಕರ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ.
ಹೆನ್ನಾಗರ ಸಮೀಪದ ಐಕಾನ್ ಬಡಾವಣೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮೂವರು ರಮೇಶ್ ಎಂಬುವರ ಮನೆಯಲ್ಲಿ ಬಾಡಿಗೆಗಿದ್ದರು. ರಾತ್ರಿ ಸಿಲಿಂಡರ್ ಆನ್ ಮಾಡಿ ಮಲಗಿದ್ದ ಪರಿಣಾಮ ಬೆಳಿಗ್ಗೆ ಎದ್ದು ಲೈಟ್ ಹಾಕುತ್ತಿದ್ದಂತೆ ಸಿಲಿಂಡರ್ ಸ್ಫೋಟಗೊಂಡಿದೆ.
ಸ್ಫೋಟಗೊಂಡ ತೀವ್ರತೆಗೆ ಮನೆಯ ಕಿಟಕಿ, ಬಾಗಿಲುಗಳು ಚೂರು ಚೂರಾಗಿವೆ. ಪರಿಣಾಮ ಮನೆಯಲ್ಲಿದ್ದ ಮೂವರಿಗೂ ಗಂಭೀರ ಗಾಯಗಳಾಗಿದ್ದು, ನಾರಾಯಣ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಬಿದನ್ ದಾಸ್ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದು, ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ತಂಡ ಭೇಟಿ ನೀಡಿದ್ದು, ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.