Friday, April 18, 2025
Google search engine

Homeರಾಜ್ಯಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡದಲ್ಲೇ ಮೊದಲ ಅನೌನ್ಸ್ಮೆಂಟ್: ಮಹೇಶ್ ಜೋಶಿ ಒತ್ತಾಯ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡದಲ್ಲೇ ಮೊದಲ ಅನೌನ್ಸ್ಮೆಂಟ್: ಮಹೇಶ್ ಜೋಶಿ ಒತ್ತಾಯ

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಿಸುತ್ತಿರುವ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ ಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅವರು ಸೋಮವಾರ ಮನವಿಯೊಂದನ್ನು ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿ ಲ್ಯಾಂಡಿಂಗ್ ಅಥವಾ ಟೇಕ್ ಆಫ್ ಆಗುವ ಪ್ರತಿಯೊಂದು ವಿಮಾನದಲ್ಲಿ ಕನ್ನಡದಲ್ಲೇ ಮೊದಲ ಅನೌನ್ಸ್ಮೆಂಟ್ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂಬಂಧ ಮಹೇಶ್ ಜೋಶಿ ಅವರು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ (MoCA) ಪತ್ರ ಬರೆದು ಮನವಿ ಮಾಡಲು ಮುಂದಾಗಿದ್ದಾರೆ.

ಜೋಶಿ ಅವರು ಬಿಐಎಎಲ್‌ನ ಎಂಡಿ ಮತ್ತು ಸಿಇಒ ಹರಿ ಮರಾರ್ ಅವರನ್ನು ಭೇಟಿ ಮಾಡಿ ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಉತ್ತೇಜಿಸುವ ಹಾಗೂ ವಿಮಾನ ಲ್ಯಾಂಡಿಂಗ್ ಅಥವಾ ಟೇಕ್ ಆಫ್ ಸಮಯದಲ್ಲಿ ಕನ್ನಡವನ್ನು ಬಳಸುವ ಬಗ್ಗೆ ಚರ್ಚಿಸಿದರು. ಚರ್ಚೆ ಬಳಿಕ ಮಾತನಾಡಿದ ಜೋಶಿ, ಕನ್ನಡ ರಾಜ್ಯೋತ್ಸವ ದಿನದಿಂದ (ನವೆಂಬರ್ 1) ವಿಮಾನಗಳಲ್ಲಿ ಕನ್ನಡದಲ್ಲೇ ಅನೌನ್ಸ್ಮೆಂಟ್ ಮಾಡುವುದನ್ನು ಪ್ರಾರಂಭಿಸಲು ನಾನು ಅವರನ್ನು ಕೇಳಿದ್ದೇನೆ. ಏಕೆಂದರೆ ಈ ವ್ಯವಸ್ಥೆಯನ್ನು ವಿಮಾನಗಳಲ್ಲಿ ಅಳವಡಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ವಿಮಾನಗಳಲ್ಲಿ ಮೊದಲ ಪ್ರಕಟಣೆಯು ಕನ್ನಡದಲ್ಲಿರಬೇಕು, ನಂತರ ಇತರ ಭಾಷೆಗಳನ್ನು ಅನುಸರಿಸಬೇಕು. ಬ್ರಿಟಿಷ್ ಏರ್ವೇಸ್ ಮತ್ತು ಸಿಂಗಾಪುರ್ ಏರ್ಲೈನ್ಸ್ ಈಗಾಗಲೇ ಇದನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿವೆ ಎಂದು ತಿಳಿಸಿದರು.

MoCA ಯಿಂದ ಒಪ್ಪಿಗೆ ಬೇಕೆಂದು ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಸ್ತಾಪಿಸಿದ್ದಾರೆ. ಹೀಗಾಗಿ ನಾನು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ತಕ್ಷಣ ಪತ್ರ ಬರೆಯುತ್ತೇನೆ ಎಂದು ಅವರು ಹೇಳಿದರು.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಡಿಸೆಂಬರ್ 20 ರಿಂದ 22 ರವರೆಗೆ ನಡೆಸಲಾಗುತ್ತಿದೆ. ಈ ಹಿನ್ನೆಲೆ ಜೋಶಿ ಅವರು ಕನ್ನಡದಲ್ಲಿ ದೊಡ್ಡ ಸ್ವಾಗತ ಫಲಕಗಳನ್ನು ಅಳವಡಿಸಲು ಮತ್ತು ಕರ್ನಾಟಕದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಾತಾವರಣವನ್ನು ನಿರ್ಮಿಸಲು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ವಿನಂತಿಸಿದ್ದಾರೆ.

ಅಮೆರಿಕ ಮತ್ತು ಯುರೋಪ್‌ ನಿಂದ ಅನೇಕ ಅನಿವಾಸಿ ಕನ್ನಡಿಗರು ಸೇರಿದಂತೆ ಲಕ್ಷಾಂತರ ಜನರು ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಕ್ಷಣದಲ್ಲಿ ಅವರು ಕರ್ನಾಟಕದಲ್ಲಿದ್ದಂತೆ ಭಾಸವಾಗಬೇಕು. ಹೀಗಾಗಿ ಬೆಂಗಳೂರು ವಿಮಾನದಲ್ಲಿ ಕನ್ನಡ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಾತಾವರಣವನ್ನು ನಿರ್ಮಿಸುವುದು ಅಗತ್ಯ. ಈ ಪ್ರಸ್ತಾವನೆಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಜೋಶಿ ತಿಳಿಸಿದರು.

RELATED ARTICLES
- Advertisment -
Google search engine

Most Popular