ಅನಂತಪುರ: ಮುಂಬರುವ ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಿದ್ದತೆ ಆರಂಭಿಸಿದ್ದು, ಕರ್ನಾಟಕ, ತೆಲಂಗಾಣದಂತೆ ಆಂದ್ರ ಪ್ರದೇಶದಲ್ಲೂ ಗ್ಯಾರಂಟಿ ಯೋಜನೆಗಳನ್ನು ನೀಡಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಣೆ ಮಾಡಿದ್ದಾರೆ. ಅನಂತಪುರದಲ್ಲಿ ನಡೆದ ನ್ಯಾಯ ಸಾಧನ ಸಭೆ ಬೃಹತ್ ಸಮಾವೇಶದಲ್ಲಿ ಪ್ರತಿ ಬಡ ಕುಟುಂಬಕ್ಕೆ ತಿಂಗಳಿಗೆ ರೂ ೫,೦೦೦ ಧನ ಸಹಾಯ ನೀಡುವ ಮೊದಲ ಗ್ಯಾರೆಂಟಿಯನ್ನು ಅವರು ಘೋಷಿಸಿದರು.
ಇಂದಿರಮ್ಮ ಸಾರ್ವತ್ರಿಕ ಮೂಲ ಆದಾಯ ಬೆಂಬಲ ಎಂಬ ಹೆಸರಿನಲ್ಲಿ ಪ್ರತಿ ತಿಂಗಳು ಮನೆಯ ಯಜಮಾನಿಯ ಖಾತೆಗೆ ನೇರವಾಗಿ ೫ ಸಾವಿರ ರೂ. ಜಮೆ ಮಾಡುವುದಾಗಿ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ನಮ್ಮ ಗ್ಯಾರಂಟಿ ಮೋದಿಯವರ ಗ್ಯಾರಂಟಿಯಂತಲ್ಲ. ನಾವು ಭರವಸೆ ನೀಡುತ್ತೇವೆ ಮತ್ತು ಅದನ್ನು ಈಡೇರಿಸುತ್ತೇವೆ ಎಂದು ಖರ್ಗೆ ಹೇಳಿದರು. ಸಮಾಜದ ಎಲ್ಲ ವರ್ಗದ ಜನರನ್ನು ಒಳಗೊಳ್ಳುವ ಅಭಿವೃದ್ಧಿ ಮಾಡುವುದಾಗಿ ಹೇಳಿದರು. ಪ್ರಧಾನಿ ಮೋದಿ ಯಾವಾಗಲೂ ಯೇ ತು ಮೋದಿ ಕಿ ಗ್ಯಾರಂಟಿ ಹೈ ಎಂದು ಹೇಳುತ್ತಾರೆ. ಮೋದಿಯವರ ಗ್ಯಾರಂಟಿ ಎಲ್ಲಿದೆ? ನಿಮ್ಮ ಬ್ಯಾಂಕ್ ಖಾತೆಗೆ ೧೫ ಲಕ್ಷ ಹಣ ಬಂದಿದೆಯಾ? ರೈತರ ಆದಾಯ ದ್ವಿಗುಣಗೊಂಡಿದೆಯಾ? ೨ ಕೋಟಿ ಉದ್ಯೋಗ ಒದಗಿಸಿದ್ದಾರಾ?’ ಎಂದು ಖರ್ಗೆ ಪ್ರಶ್ನಿಸಿದರು.
ಪ್ರಧಾನಿ ಮೋದಿಯವರು ಯಾವಾಗಲೂ ನಮ್ಮ ಪಕ್ಷದ ಮೇಲೆ ಯಾಕೆ ದಾಳಿ ಮಾಡುತ್ತಾರೆ? ಅವರು ನಮ್ಮ ಶಾಸಕರು, ಸಂಸದರ ಮೇಲೆ ದಾಳಿ ಮಾಡಿ, ದುರುಪಯೋಗಪಡಿಸಿಕೊಳ್ಳುತ್ತಿರುವುದು ಮತ್ತು ಅವರನ್ನು ಖರೀದಿಸುತ್ತಿರುವುದು ಯಾಕೆ?” ಎಂದು ಖರ್ಗೆ ಪ್ರಶ್ನಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನದ ಪ್ರಕಾರ `ಪೋಲವರಂ’ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಕಾಂಗ್ರೆಸ್ ಆಡಳಿತಾವಧಿಯಲ್ಲಿಯೇ ಈ ಯೋಜನೆಯ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು ಎಂದು ತಿಳಿಸಿದರು.
ಮುಖ್ಯಮಂತ್ರಿ ಹಾಗೂ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ, ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ನಾಯಕ ಪವನ್ ಕಲ್ಯಾಣ್ ವಿರುದ್ಧ ಖರ್ಗೆ ಇದೇ ಸಂದರ್ಭದಲ್ಲಿ ತೀವ್ರ ವಾಗ್ದಾಳಿ ನಡೆಸಿದರು.