ಸಾರಾಯಿ ಅಂಗಡಿಗೆ ಬೆಂಕಿ ಇಡಿ, ನಾನೀದ್ದೇನೆ.. ಚಿತ್ರದುರ್ಗ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಮತ್ತೊಂದು ಯಡವಟ್ಟು
ಚಿತ್ರದುರ್ಗ: ಅಕ್ರಮ ಮದ್ಯ ಮಾರಾಟ ಮಾಡುವವರ ಮನೆಗೆ ಬೆಂಕಿ ಇಡಿ, ಏಕೆ ಯೋಚನೆ ಮಾಡುತ್ತೀರಿ? ಎಂದು ಶಾಸಕ ಕೆ .ಸಿ ವೀರೇಂದ್ರ ಪಪ್ಪಿ, ಮಹಿಳೆಯರಿಗೆ ಹೇಳಿದ ವಿಡಿಯೋ ಈಗ ಚರ್ಚೆಗೆ ಗ್ರಾಸವಾಗಿದೆ. ತಾಲೂಕಿನ ಹಿರೇಗುಂಟನೂರು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಹಿಳೆಯರು ಅಕ್ರಮ ಮಧ್ಯ ಮಾರಾಟದ ಬಗ್ಗೆ ನೀಡಿದ ದೂರಿಗೆ ಶಾಸಕರು ಈ ರೀತಿ ಪ್ರತಿಕ್ರಿಯಿಸಿರುವುದು ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಅಕ್ರಮ ಮದ್ಯ ಮಾರಾಟದಿಂದ ಗ್ರಾಮದಲ್ಲಿ ತೊಂದರೆ ಉಂಟಾಗುತ್ತಿದ್ದು ,ಕುಡಿದು ಬಂದು ದಿನನಿತ್ಯ ಪುರುಷರಿಂದ ಮನೆಗಳಲ್ಲಿ ಗಲಾಟೆಗಳು ನಡೆಯುತ್ತಿವೆ, ಅಲ್ಲದೆ ಅಕ್ರಮ ಮದ್ಯ ಮಾರಾಟ ತಡೆಯಲು ಇದುವರೆಗೂ ಯಾರು ಕ್ರಮ ಕೈಗೊಂಡಿಲ್ಲ, ಕೈ ಮುಗಿಯುತ್ತೇವೆ ಅಕ್ರಮ ಮದ್ಯ ಮಾರಾಟ ತಡೆಯಿರಿ ಎಂದು ಮಹಿಳೆಯರು ಮನವಿ ಮಾಡಿದ್ದಾರೆ, ಈಗಲೇ ನಮ್ಮ ಜೊತೆಗೆ ಬನ್ನಿ ಆ ಸ್ಥಳವನ್ನು ತೋರಿಸುತ್ತೇವೆ ಎಂದು ಹೇಳಿದಾಗ ಅಧಿಕಾರಿಗಳನ್ನು ಕಳಿಸಿಕೊಡುತ್ತೇನೆ ಎಂದು ಶಾಸಕ ಕೆ ಸಿ ವೀರೇಂದ್ರ ಉತ್ತರ ನೀಡಿದ್ದಾರೆ.
ಇಷ್ಟು ಹೇಳಿದ್ದೇವೆ ಮುಂದೆ ಅವರ ಮನೆಗೆ ಬೆಂಕಿ ಇಡುತ್ತೇವೆ ಎಂದು ಮಹಿಳೆಯೊಬ್ಬರು ಹೇಳಿದಾಗ “ನೀನು ಇಡಮ್ಮ ನಾನಿದ್ದೇನೆ, ಯಾಕೆ ಯೋಚನೆ ಮಾಡ್ತೀಯಾ? ಎಂದು ಶಾಸಕರು ಪ್ರತಿಕ್ರಿಸಿದ ಮಾತು ವಿಡಿಯೋದಲ್ಲಿದೆ. ನೆನ್ನೆಯಷ್ಟೇ ಕಾನೂನು ವಿದ್ಯಾರ್ಥಿಗಳ ಹಾಸ್ಟೆಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಾಸ್ಟೆಲ್ ವಾರ್ಡನ್ ರನ್ನು ರೂಮಿಗೆ ಹಾಕಿ ಹೊಡೆಯಿರಿ ಅಂದಿದ್ದ ವಿಡಿಯೋ ವೈರಲ್ ಆಗಿತ್ತು. ಈಗ ಮತ್ತೊಂದು ಹೇಳಿಕೆ ಕೊಟ್ಟು ಶಾಸಕ ವೀರೇಂದ್ರ ಪಪ್ಪಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.