ಬೆಂಗಳೂರು : ಹೊಸ ಆರ್ಥಿಕ ವರ್ಷದಿಂದ ಸರ್ಕಾರ ಜನರಿಗೆ ಮತ್ತೊಂದು ಶಾಕ್ ಕೊಡಲು ತಯಾರಿಗಿದ್ದು, ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಹೆಚ್ಚಳದ ಬಳಿಕ ಇದೀಗ ವಿದ್ಯುತ್ ದರ ಸೇರಿದಂತೆ ಹಲವು ದರಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ನಷ್ಟದಲ್ಲಿರುವ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಜೆಸ್ಕಾಂ, ಚೆಸ್ಕಾಂ, ಹೆಸ್ಕಾಂ ಮತ್ತು ಮೆಸ್ಕಾಂ ಸಂಸ್ಥೆಗಳು ರಾಜ್ಯ ಸರ್ಕಾರದ ಮುಂದೆ ವಿದ್ಯುತ್ ದರ ಏರಿಸುವಂತೆ ಪ್ರಸ್ತಾವನೆ ಸಲ್ಲಿಸಿವೆ. ಅಷ್ಟೇ ಅಲ್ಲದೇ ಟೋಲ್ ರೇಟ್ ಜಾಸ್ತಿಯಾಗಲಿದೆ. ರಾಜ್ಯದ 62 ಟೋಲ್ ಪ್ಲಾಜಾಗಳಲ್ಲಿ ಮತ್ತು ಪ್ರಮುಖ 9 ಹೆದ್ದಾರಿಗಳಲ್ಲಿ ಟೋಲ್ ದರ ಶೇ. 3 ರಿಂದ 5 ರಷ್ಟು ಹೆಚ್ಚಳವಾಗಲಿದೆ. ವಾರ್ಷಿಕ ಪಾಸ್ ದರವೂ ಏರಿಕೆಯಾಗಿದೆ.
ವಿದ್ಯುತ್ ದರ ಏರಿಕೆ ಯಾವಾಗ ಆಗಬಹುದು?
ವಿದ್ಯುತ್ ಸರಬರಾಜು ಸಂಸ್ಥೆಗಳು ಸುಮಾರು 4,500 ಕೋಟಿ ರೂಪಾಯಿ ನಷ್ಟದಲ್ಲಿವೆ. ಸಂಸ್ಥೆಗಳಿಗೆ ಸಂಗ್ರಹವಾಗುವ ಆದಾಯ ಮತ್ತು ನಿರ್ವಹಣಾ ವೆಚ್ಚದ ನಡುವಿನ ಅಂತರ ಜಾಸ್ತಿಯಾಗಿರುವುದರಿಂದ ನಷ್ಟವಾಗುತ್ತಿದೆ. ದರ ಹೆಚ್ಚಿಸುವ ಮೂಲಕ ನಷ್ಟವನ್ನು ಭರಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಬೆಲೆ ಏರಿಕೆ ಮಾಡಬಹುದು. ಪ್ರತಿ ಯೂನಿಟ್ ವಿದ್ಯುತ್ ಬೆಲೆ 12ರಿಂದ 15 ಪೈಸೆ ಹೆಚ್ಚಳ ಮಾಡಬಹುದು ಎಂದು ಊಹಿಸಲಾಗಿದೆ.
ಹೆಚ್ಚಾಯ್ತು ಕಾರಿನ ಬೆಲೆ!
ಐಷಾರಾಮಿ ಕಾರು ತಯಾರಕರಾದ ಆಡಿ ಇಂಡಿಯಾ, ಮರ್ಸಿಡಿಸ್-ಬೆನ್ಜ್ ಇಂಡಿಯಾ ಮತ್ತು ಬಿಎಂಡಬ್ಲ್ಯು ಇಂಡಿಯಾ ಹೊಸ ಹಣಕಾಸು ವರ್ಷಕ್ಕೆ ಬೆಲೆ ಹೆಚ್ಚಳ ಆರಂಭವಾಗುವಂತೆ ಜಾರಿಯಾಗಿವೆ. 2026 – 27ನೇ ಹಣಕಾಸು ವರ್ಷಕ್ಕೆ ಅನ್ವಯವಾಗುವಂತೆ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ದರವನ್ನು ಪರಿಷ್ಕರಿಸಲಾಗಿದ್ದು, ಏಪ್ರಿಲ್ 1 ರಿಂದ ಹೊಸ ದರಗಳು ಜಾರಿಗೆ ಬರಲಿವೆ.
ಖಾಸಗಿ ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳ ಮಾಲೀಕರು ಇನ್ನು ಮುಂದೆ ವಾರ್ಷಿಕ ಪಾಸ್‌ಗಾಗಿ 3,075 ರೂ. ಪಾವತಿಸಬೇಕಾಗುತ್ತದೆ. ಈ ಹಿಂದೆ ಈ ಪಾಸ್‌ನ ದರ 3,000 ರೂ. ಇತ್ತು. ಅಂದರೆ, ಈಗಿನ ದರದಲ್ಲಿ 75 ರೂ. ಹೆಚ್ಚಳ ಮಾಡಲಾಗಿದೆ. ಈ ಪಾಸ್ ಪಡೆದ ವಾಹನವು ಒಂದು ವರ್ಷದ ಅವಧಿಯಲ್ಲಿ ಅಥವಾ ಗರಿಷ್ಠ 200 ಬಾರಿ ಟೋಲ್ ಪ್ಲಾಜಾಗಳನ್ನು ದಾಟಲು ಅವಕಾಶ ನೀಡುತ್ತದೆ.



