ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಡೋರನಹಳ್ಳಿ ಬಳಿ ಶನಿವಾರ ರಾತ್ರಿ ಕಾರು ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಬಿದ್ದು ನಾಲ್ವರು ಮಹಿಳೆಯರು ಸಾವಿಗೀಡಾದರು.
ತಾಲ್ಲೂಕಿನ ಗಾಮನಹಳ್ಳಿಯ ದೋಣಯ್ಯ ಅವರ ಪತ್ನಿ ಮಹದೇವಮ್ಮ (50), ಅವರ ಸಂಬಂಧಿಕರಾದ ತಿ.ನರಸೀಪುರ ತಾಲ್ಲೂಕು ಗೊರವನಹಳ್ಳಿ ಗ್ರಾಮದ ಸಂಜನಾ, ಮಾದೇವಿ ಮತ್ತು ರೇಖಾ ಮೃತರು.
ಶವಗಳನ್ನು ನಾಲೆಯಿಂದ ಹೊರತೆಗೆಯಲಾಗಿದೆ. ಚಾಲಕ ಗೊರವನಹಳ್ಳಿಯ ಮನೋಜ್ ಈಜಿ ದಡ ಸೇರಿದ್ದಾರೆ.
ಗಾಮನಹಳ್ಳಿಯಿಂದ ದೊಡ್ಡಮುಲಗೂಡು ಗ್ರಾಮದ ಮಹದೇವಮ್ಮ ಅವರ ಸಂಬಂಧಿಕರ ಮನೆಗೆ ತೆರಳುತ್ತಿದ್ದಾಗ ನಾಲೆ ಏರಿಯ ತಿರುವಿನಲ್ಲಿ ಕಬ್ಬಿಣದ ತಾತ್ಕಾಲಿಕ ತಡೆಗೋಡೆಗೆ ಗುದ್ದಿ ಕಾರು ನಾಲೆಗೆ ಉರುಳಿ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಅರಕೆರೆ ಠಾಣೆ ಪೊಲೀಸರು ಭೇಟಿ ನೀಡಿದ್ದರು.