ಬೆಂಗಳೂರು: “ನಮ್ಮ ಮೆಟ್ರೋ” ಕಾಮಗಾರಿಯಲ್ಲಿ ನಿರ್ಲಕ್ಷ್ಯ ಮತ್ತೆ ಜೀವಹಾನಿಗೆ ಕಾರಣವಾಗಿದ್ದು, ಬೆಂಗಳೂರು ನಗರದ ಕೋಗಿಲು ಕ್ರಾಸ್‌ನಲ್ಲಿ ಭಾನುವಾರ ತಡರಾತ್ರಿಗೆ ಭೀಕರ ಘಟನೆ ನಡೆದಿದೆ. ಮೆಟ್ರೋ ಕಾಮಗಾರಿಗಾಗಿ ಸಾಗಿಸುತ್ತಿದ್ದ ಬೃಹತ್ ಗಾತ್ರದ ವಯಾಡೆಕ್ಟ್ ಉರುಳಿ ಆಟೋ ಮೇಲೆ ಬಿದ್ದು, ಓರ್ವ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರಾದವರು ಹೆಗಡೆನಗರ ನಿವಾಸಿ ಖಾಸಿಂ ಸಾಬ್ ಎನ್ನಲಾಗಿದ್ದು, ಅವರು ಪ್ಯಾಸೆಂಜರ್‌ರನ್ನು ಪಿಕಪ್ ಮಾಡಿಕೊಂಡು ನಾಗವಾರದ ಕಡೆಗೆ ತೆರಳುತ್ತಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ. ತಡರಾತ್ರಿ ಸುಮಾರು 12:05ರ ಹೊತ್ತಿಗೆ ಈ ಭೀಕರ ಘಟನೆ ನಡೆದಿದೆ. ಆಘಾತದ ಸಂಗತಿಯೆಂದರೆ, ಆಟೋದಲ್ಲಿದ್ದ ಪ್ಯಾಸೆಂಜರ್ ಕಾಲಚಾತುರ್ಯದಿಂದ ತಕ್ಷಣ ಇಳಿದು ಪಾರಾಗಿದ್ದಾರೆ.
ಏರ್ಪೋರ್ಟ್ ಮಾರ್ಗದ ಮೆಟ್ರೋ ಕಾಮಗಾರಿಗೆ ಬಳಸುವ ವಯಾಡೆಕ್ಟ್ ಅನ್ನು 18 ಚಕ್ರದ ದೊಡ್ಡ ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ಕೋಗಿಲು ಕ್ರಾಸ್‌ನಲ್ಲಿ ತಿರುವು ತೆಗೆದುಕೊಳ್ಳುವ ವೇಳೆ ಲಾರಿ ಸಮತೋಲನ ಕಳೆದು ಎರಡು ತುಂಡಾಗಿ ಬಿತ್ತು. ಇದರ ಪರಿಣಾಮವಾಗಿ, ಲಾರಿಯಿಂದ ನೆಲಕ್ಕುರುಳಿದ ವಯಾಡೆಕ್ಟ್ ನೇರವಾಗಿ ಪಕ್ಕದಲ್ಲಿದ್ದ ಆಟೋ ಮೇಲೆ ಬಿದ್ದು, ಚಾಲಕ ಖಾಸಿಂ ಸಾಬ್ ಸ್ಥಳದಲ್ಲೇ ಮೃತಪಟ್ಟರು. ಆಟೋ ಸಂಪೂರ್ಣ ಜಖಂಗೊಂಡಿದೆ.
ಈ ಘಟನೆ ಮತ್ತೆ ಮೆಟ್ರೋ ಕಾಮಗಾರಿಗಳಲ್ಲಿ ಸುರಕ್ಷತಾ ನಿಯಮಗಳ ಪಾಲನೆ ಕುರಿತು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. 2023ರ ಜನವರಿಯಲ್ಲಿಯೇ ಇದೇ ರೀತಿಯ ಘಟನೆಯೊಂದು ನಾಗವಾರ ಮುಖ್ಯ ರಸ್ತೆಯಲ್ಲಿ ನಡೆದಿದ್ದು, ಅಂದಿನ ಘಟನೆಯಲ್ಲಿ ಬೃಹತ್ ಗಾತ್ರದ ಡೆಕ್ಟ್ ಕುಸಿದು ಬೈಕ್ ಸವಾರ ಸಾವನ್ನಪ್ಪಿದ್ದರು.
ಈ ಹಿಂದಿನ ಘಟನೆಗಳಿಂದ ಪಾಠವಿಲ್ಲದೆ ಮತ್ತೆ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಅಕ್ರೋಶ ಉಂಟುಮಾಡಿದೆ. ಘಟನೆಯ ಕುರಿತು ಯಲಹಂಕ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಾರ್ವಜನಿಕ ಸುರಕ್ಷತೆಗೆ ಹೆಚ್ಚಿನ ಒತ್ತನ್ನು ನೀಡಬೇಕೆಂಬ ಬೇಡಿಕೆಗಳು ಗಟ್ಟಿಯಾಗಿ ಕೇಳಿಬರುತ್ತಿವೆ.