ಬೆಂಗಳೂರು : ಜನ ಸಾಮಾನ್ಯರ ಪರವಾಗಿ ಎಂದಿಗೂ ಕೆಲಸ ಮಾಡದೇ ಬರೀ ಕಾರ್ಪೊರೇಟ್ ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಲೇ ಬಂದಿರುವ ಕೇಂದ್ರ ಸರ್ಕಾರವು ಶ್ರಮಿಕ ವರ್ಗವನ್ನು ವಂಚಿಸುವ ತನ್ನ ಹೀನ ಪ್ರವೃತ್ತಿಯನ್ನು ಮುಂದುವರೆಸಿದೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಕೇಂದ್ರ ಬಜೆಟ್ 2025ರ ಕುರಿತ ಪ್ರತಿಕ್ರಿಯಿಸಿದ ಅವರು, 50 ಲಕ್ಷದ 65 ಸಾವಿರ ಕೋಟಿ ಗಾತ್ರದ ಬಜೆಟ್ ನಲ್ಲಿ ಜನಪರವಾಗಿ ಹೇಳಿಕೊಳ್ಳಬಹುದಾದ ಒಂದೇ ಒಂದು ಯೋಜನೆಯೂ ಸಹ ಇಲ್ಲದ ಕೇಂದ್ರದ ಬಜೆಟ್ ಕರ್ನಾಟಕ ವಿರೋಧಿಯಾಗಿದ್ದು ರಾಜ್ಯ ನೀಡುವ ತೆರಿಗೆ ಹಣಕ್ಕೆ ಪ್ರತಿಯಾಗಿ ಅವಮಾನವನ್ನು ನಮಗೆ ಉಡುಗೊರೆಯಾಗಿ ನೀಡಿದೆ. ಮಧ್ಯಮ ವರ್ಗಕ್ಕೆ 12 ಲಕ್ಷದ ವರೆಗೆ ಆದಾಯ ತೆರಿಗೆ ವಿನಾಯ್ತಿ ಎಂದು ಹೇಳಿ ಆ ಮೂಲಕ ಪ್ರಚಾರ ಪಡೆಯಲು ಪ್ರಯತ್ನಿಸುತ್ತಿರುವ ಕೇಂದ್ರ ಸರಕಾರವು ನಿಗದಿ ಪಡಿಸಿರುವ ತೆರಿಗೆ ಮಿತಿಯ slab ನಲ್ಲಿ 8 ರಿಂದ 12 ಲಕ್ಷದವರೆಗಿನ ಆದಾಯ ತೆರಿಗೆಗೆ ಶೇ.10 ತೆರಿಗೆ ಎಂದು ನಮೂದಿಸಿದ್ದು ಜನರನ್ನು ಅಸ್ಪಷ್ಟತೆಗೆ ನೂಕುವ ಕೆಲಸ ಮಾಡಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಇವರ ಹಿಂದಿನ ಘೋಷಣೆಗಳು ಬಹುತೇಕ ಸುಳ್ಳೆಂದು ಸಾಬೀತಾಗಿದ್ದು ಈ ಗೊಂದಲಗಳೂ ಕೂಡಾ ಕೇಂದ್ರ ಸರಕಾರದ ವಂಚನೆಯ ತಂತ್ರವಾಗಿದೆ ಎಂದು ನಾವು ಊಹಿಸಬಹುದಾಗಿದೆ. ಹಿಂಬಾಲಕರ ಮೂಲಕ ತನ್ನನ್ನು ವಿಶ್ವಗುರು ಎಂದು ಹೇಳಿಕೊಳ್ಳುವ ಪ್ರಧಾನಿಗಳ ಆಡಳಿತದಲ್ಲಿ ದೇಶದ ಸಾಲವು ಮತ್ತೆ 15.86 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದ್ದು ಯಾವುದೇ ಯೋಜನೆಗಳಿಲ್ಲದೇ ಯಾರ ಜೇಬು ತುಂಬಿಸಲು ಇವರು ಇಷ್ಟೊಂದು ಸಾಲ ಮಾಡುತ್ತಿದ್ದಾರೆ ಎಂಬುದು ಸದ್ಯದ ಪ್ರಶ್ನೆಯಾಗಿದೆ ಎಂದಿದ್ದಾರೆ.
ಇನ್ನು ಕಾರ್ಪೊರೇಟ್ ತೆರಿಗೆಯ ಪ್ರಮಾಣವು ಯಥಾಸ್ಥಿತಿಯಲ್ಲಿ ಮುಂದುವರೆದಿದ್ದು, ಸರಕಾರದಿಂದ ಕಾರ್ಪೊರೇಟ್‌ಗಳ ಲಕ್ಷಾಂತರ ಕೋಟಿ ಸಾಲ ಮನ್ನಾ ಹೊರತಾಗಿಯೂ ಕಂಪನಿಗಳು ಏಳಿಗೆ ಆಗದೇ ಹಾಗೇ ಉಳಿದಿದ್ದು ಸರಕಾರವು ಖಾಸಗಿಯವರ ಸಾಲವನ್ನು ಜನರ ಮೇಲೆ ಹೊರಿಸುವ ಕೆಲಸ ಮಾಡುತ್ತಿವೆ. ಮುಖ್ಯವಾಗಿ ಬಜೆಟ್ ನಲ್ಲಿ ಎಲ್ಲಿಯೂ ಕೂಡಾ ಉದ್ಯೋಗ ಸೃಷ್ಟಿಯ ಕುರಿತು ಮಾತನಾಡದ ಕೇಂದ್ರ ಸರಕಾರವು ಯುವಕರ ಮೇಲಿನ ತನ್ನ ತಿರಸ್ಕಾರದ ಧೋರಣೆಯನ್ನು ಮುಂದುವರೆಸಿದೆ. ಅತಿ ಮುಖ್ಯವಾಗಿ ದೇಶದ ಬೆನ್ನೆಲುಬು ಆಗಿರುವ ರೈತರಿಗೆ ಯಾವುದೇ ರೀತಿಯ ಉಪಯುಕ್ತ ಯೋಜನೆಗಳನ್ನು ನೀಡದ ಕೇಂದ್ರ ಸರಕಾರವು ತಾನು ಸದಾ ರೈತ ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ಟೀಕಸಿದ್ದಾರೆ.
ಅತಿ ಮುಖ್ಯವಾಗಿ ಕರ್ನಾಟಕದಿಂದ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾಗಿ, ಕೇಂದ್ರದಲ್ಲಿ ಹಣಕಾಸು ಸಚಿವೆಯೂ ಆಗಿರುವ ನಿರ್ಮಲಾ ಸೀತಾರಾಮನ್ ಅವರು, ಮೇಕೆದಾಟು, ಕಳಸಾ ಬಂಡೂರಿ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಯಾವುದೇ ಅನುದಾನ ನೀಡದೇ ಹೆಚ್ಚು ತೆರಿಗೆ ಪಾವತಿಸುವ ನಮ್ಮ ರಾಜ್ಯಕ್ಕೆ ವಂಚನೆ ಮಾಡಿದ್ದು ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಇನ್ನು ಕೊನೆಯದಾಗಿ ನಮ್ಮ ಸಮಾಜ ಕಲ್ಯಾಣ ಇಲಾಖೆಗೆ ಕೇಂದ್ರದಿಂದ ಬರಬೇಕಿದ್ದ 245 ಕೋಟಿ ರೂಪಾಯಿಗಳ ಪೈಕಿ ಕೇವಲ 58.08 ಕೋಟಿ ರೂಪಾಯಿಗಳಷ್ಟು ಅನುದಾನವು ಬಿಡುಗಡೆ ಆಗಿದ್ದು ಉಳಿಕೆ ಹಣವನ್ನು ಬಿಡುಗಡೆ ಮಾಡುವಲ್ಲಿ ಕೇಂದ್ರ ಸರ್ಕಾರವು ವಿಳಂಬ ಮಾಡುತ್ತಿದ್ದು ಇದು ಪರಿಶಿಷ್ಟ ಸಮುದಾಯಗಳ ವಿರೋಧಿ ಧೋರಣೆಗೆ ಹಿಡಿದ ಕನ್ನಡಿ ಆಗಿದ್ದು ಈ ನಿರ್ಲಕ್ಷ್ಯವನ್ನು ಖಂಡಿಸುತ್ತೇನೆ ಎಂದು ತಿಳಿಸಿದ್ದಾರೆ.