ಟೇಲ್ ಆವೀವ್: ಆಸ್ಟ್ರೇಲಿಯಾದ ಪ್ರಸಿದ್ಧ ಪ್ರವಾಸಿ ತಾಣವಾದ ಸಿಡ್ನಿಯ ಬೊಂಡಿ ಬೀಚ್ ನಲ್ಲಿ ಯಹೂದಿಗಳ ಪ್ರಮುಖ ಧಾರ್ಮಿಕ ಆಚರಣೆ ಹನುಕ್ಕಾ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ್ದ ಯಹೂದಿಗಳ ಗುಂಪನ್ನು ಟಾರ್ಗೆಟ್ ಮಾಡಿದ ಇಬ್ಬರು ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ 15 ಮಂದಿ ಸಾವನ್ನಪ್ಪಿದ್ದು, ಹತ್ತಾರು ಜನರು ಗಾಯಗೊಂಡಿದ್ದಾರೆ. ಇನ್ನೂ ತಮ್ಮ ಸಮುದಾಯದ ಮೇಲೆ ನಡೆದ ಈ ದಾಳಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಣ್ಣು ಕೆಂಪಾಗುವಂತೆ ಮಾಡಿದೆ.
ಈ ದಾಳಿಯ ಕುರಿತು ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ನಡೆದ ಸಾರ್ವಜನಿಕ ಭಾಷಣವೊಂದರಲ್ಲಿ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ ಬೆಂಜಮಿನ್ ನೆತನ್ಯಾಹು, ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಸಿಡ್ನಿಯಲ್ಲಿ ಯಹೂದಿಗಳ ಕಾರ್ಯಕ್ರಮವೊಂದರ ಮೇಲೆ ನಡೆದ ದಾಳಿಯಲ್ಲಿ 15 ಮಂದಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ, ಆಸ್ಟ್ರೇಲಿಯಾ ಸರ್ಕಾರದ ನೀತಿಗಳು ಯೆಹೂದಿ ವಿರೋಧಿ ಭಾವನೆಗಳನ್ನು ಕೆರಳಿಸಿವೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಮಾತನಾಡಿ, ಸಿಡ್ನಿಯಲ್ಲಿ ನಡೆದ ದುರಂತ ಘಟನೆಗೆ ಆಸ್ಟ್ರೇಲಿಯಾ ಸರ್ಕಾರದ ನಿರ್ಧಾರಗಳೇ ಕಾರಣ ಎಂದು ಪರೋಕ್ಷವಾಗಿ ನುಡಿದಿದ್ದಾರೆ. 3 ತಿಂಗಳ ಹಿಂದೆ ಆಗಸ್ಟ್‌ನಲ್ಲಿ ಆಸ್ಟ್ರೇಲಿಯಾ ಸರ್ಕಾರವು ಪ್ಯಾಲೆಸ್ತೀನ್ ರಾಜ್ಯವನ್ನು ಗುರುತಿಸುವ ನಿರ್ಧಾರ ತೆಗೆದುಕೊಂಡಿತ್ತು. ಈ ವೇಳೆ ನಾನು ಆಸ್ಟ್ರೇಲಿಯಾ ಪ್ರಧಾನಿ ಆಲ್ಬನೀಸ್‌ಗೆ ಪತ್ರ ಬರೆದು ನಿಮ್ಮ ನೀತಿಗಳು ಯೆಹೂದಿ ವಿರೋಧಿ ಭಾವನೆಗಳ ಬೆಂಕಿಗೆ ತುಪ್ಪ ಸುರಿಯುತ್ತಿವೆ ಎಂದು ಸ್ಪಷ್ಟವಾಗಿ ಹೇಳಿದ್ದೆ. ಆದರೆ, ಈಗ ಅದು ರುಜುವಾಗಿದೆ ಎಂದು ಕಿಡಿಕಾರಿದ್ದಾರೆ.
ಅಲ್ಲದೆ, ಯೆಹೂದಿ ವಿರೋಧಿ ಭಾವನೆಗಳು ಒಂದು ಕ್ಯಾನ್ಸರ್ ಇದ್ದಂತೆ. ನಾಯಕರು ಮೌನವಾಗಿದ್ದಾಗ ಮತ್ತು ಸರಿಯಾದ ಕ್ರಮ ಕೈಗೊಳ್ಳದಿದ್ದಾಗ ಇದು ಹರಡುತ್ತದೆ ಎಂದು ಹೇಳಿದ್ದಾರೆ. ಈ ಮಧ್ಯೆ ಇಸ್ರೇಲ್ ಪ್ರಧಾನಿಗಳ ಆಸ್ಟ್ರೇಲಿಯಾ ಸರ್ಕಾರ ಯಹೂದಿ ವಿರೋಧಿ ಭಾವನೆ ಸೃಷ್ಟಿಸುತ್ತಿದೆ ಎಂಬ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ ಎನ್ನಲಾಗುತ್ತಿದೆ.



