Friday, April 11, 2025
Google search engine

Homeರಾಜ್ಯಸುದ್ದಿಜಾಲಅನುಭವ ಮಂಟಪಕ್ಕೆ ಅಪ್ಪಣ್ಣ ಆಧಾರ ಸ್ತಂಭ: ಡಾ. ಭೈರೇಗೌಡ

ಅನುಭವ ಮಂಟಪಕ್ಕೆ ಅಪ್ಪಣ್ಣ ಆಧಾರ ಸ್ತಂಭ: ಡಾ. ಭೈರೇಗೌಡ

ರಾಮನಗರ: ಇತಿಹಾಸದಲ್ಲಿ ಹಡಪದ ಅಪ್ಪಣ್ಣನವರ ಬಗೆಗಿನ ವಿವರಗಳು ಅತ್ಯಲ್ಪ. ಅವರ ಹೆಸರಿಗೆ ಹಡಪದ ಎಂಬ ವೃತ್ತಿ ನಾಮ ಸೇರಿಕೊಂಡಿದೆ. ಹಡಪ ಅಥವಾ ಅಡಪ ಎಂಬುದು ಕ್ಷೌರಿಕರ ಸಾಮಾನುಗಳ ಪೆಟ್ಟಿಗೆ ಅಥವಾ ತಾಂಬೂಲದ ಕೈಚೀಲ ಎಂಬ ಎರಡು ಅರ್ಥಗಳನ್ನು ಸೂಚಿಸುತ್ತದೆ ಎಂದು ಜಾನಪದ ವಿದ್ವಾಂಸರಾದ ಡಾ. ಭೈರೇಗೌಡ ಅವರು ತಿಳಿಸಿದರು.

ಅವರು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಹಡಪದ ಅಪ್ಪಣ್ಣ ಅವರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಅಪ್ಪಣ್ಣ ಅವರ ಜನ್ಮಸ್ಥಳ ಬಸವನಬಾಗೇವಾಡಿ ಸಮೀಪದ ಮಸಬಿನಾಳ ಎಂಬ ಗ್ರಾಮ. ತಂದೆ ಚೆನ್ನವೀರಪ್ಪ, ತಾಯಿ ದೇವಕಮ್ಮ. ಧರ್ಮಪತ್ನಿ ಲಿಂಗಮ್ಮ. ಹನ್ನೆರಡನೆಯ ಶತಮಾನದ ವಚನ ಚಳವಳಿಯು ಚರಿತ್ರಾರ್ಹವಾದುದು. ಕನ್ನಡ ನಾಡಿನ ಸಾಂಸ್ಕೃತಿಕ, ಸಾಮಾಜಿಕ ಮತ್ತು ಧಾರ್ಮಿಕ ಪರಿವರ್ತನೆಗೆ ಕಾರಣವಾದ ಈ ಚಳವಳಿಯು ಸಮಾಜದ ಶೋಷಿತ ವರ್ಗದ ದಲಿತರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಿತು. ಅವರಿಗೆ ಸಾಹಿತ್ಯ ಕೇವಲ ಉನ್ನತ ವರ್ಗಕ್ಕೆ ಮೀಸಲಾಗಿದ್ದು ವ್ಯವಸ್ಥೆಯ ಬಹುಸಂಖ್ಯಾತರು ಉಪೇಕ್ಷೆಗೆ ಒಳಗಾಗಿದ್ದರು. ಇಂತಹ ಜನರ ಬದುಕಲ್ಲಿ ಹೊಸ ಗಾಳಿ ಬೀಸಿದಂತೆ ವಚನ ಚಳವಳಿ ಪ್ರವಹಿಸಿ ಜಗತ್ತಿನ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದಕ್ಕೆ ನಾಂದಿ ಹಾಡಿತು. ಈ ಚಳವಳಿಯ ನೇತಾರನಾಗಿ ಬಸವಣ್ಣ ರೂಪುಗೊಂಡರೆ, ಇವರೊಂದಿಗೆ ಆತ್ಮಜ್ಞಾನಿ ಅಲ್ಲಮ, ಚನ್ನಬಸವ, ಅಕ್ಕಮಹಾದೇವಿ ಮೊದಲಾದ ನೂರಾರು ಶರಣರು ಬದಲಾವಣೆಯ ಮಹಾ ಆಂದೋಲನದಲ್ಲಿ ಪಾಲುದಾರರಾಗಿ ಅದನ್ನು ಚಿರಸ್ಥಾಯಿಗೊಳಿಸಿದರು. ಇಂತಹ ಶರಣರ ಪೈಕಿ ಹಡಪದ ಅಪ್ಪಣ್ಣನವರೂ ಒಬ್ಬರಾಗಿದ್ದರು ಎಂದರು.

ಕ್ಷೌರಿಕ ಕಾಯಕದವರು ತಮ್ಮನ್ನು ಹಡಪದ ಅಪ್ಪಣ್ಣನವರ ವಂಶದವರೆAದು ಹೇಳಿಕೊಳ್ಳುವುದರಿಂದ ಅವರ ವಾದವನ್ನೇ ಪುರಸ್ಕರಿಸಿ ಕವಿ ಚರಿತ್ರಕಾರರು ಅಪ್ಪಣ್ಣನವರನ್ನು ಕ್ಷೌರಿಕ ಸಮುದಾಯದವರೆಂದೇ ಗುರುತಿಸಿದ್ದಾರೆ. ಅಪ್ಪಣ್ಣನವರು ತಮ್ಮ ಜೀವನವಿಡೀ ಬಸವಣ್ಣನ ನಂಬಿಕಸ್ಥ ಸಹಾಯಕರಾಗಿದ್ದರು. ಶರಣರೆಲ್ಲರ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದರು. ಲೌಕಿಕ ಮತ್ತು ಆಧ್ಯಾತ್ಮಿಕ ಬದುಕಿಗೆ ಯಾವ ಲೋಪವೂ ಬಾರದಂತೆ ನಡೆದುಕೊಳ್ಳುತ್ತಿದ್ದುದರಿಂದ ಶರಣ ಸಮೂಹ ಅವರನ್ನು ನಿಜಸುಖಿ ಅಪ್ಪಣ್ಣ ಎಂದು ಕರೆಯಿತು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಶ್ರೀನಿವಾಸ್ ಅವರು ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಮೇಶ್ ಬಾಬು, ಸಮುದಾಯದ ಮುಖಂಡರುಗಳು ಹಾಗೂ ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular