Friday, April 18, 2025
Google search engine

Homeಸ್ಥಳೀಯಅಪ್ಪಣ್ಣನವರ ಚಿಂತನೆಗಳು ಮನುಕುಲಕ್ಕೆ ದಾರಿದೀಪ

ಅಪ್ಪಣ್ಣನವರ ಚಿಂತನೆಗಳು ಮನುಕುಲಕ್ಕೆ ದಾರಿದೀಪ


ಪಿರಿಯಾಪಟ್ಟಣ: ಶಿವಶರಣ ಹಡಪದ ಅಪ್ಪಣ್ಣನವರ ವಚನಗಳು ಹಾಗೂ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ದಾರಿದೀಪಗಳಾಗಿವೆ ಎಂದು ತಹಶೀಲ್ದಾರ್ ಕುಂಞಿ ಅಹಮದ್ ಬಣ್ಣಿಸಿದರು.
ಪಟ್ಟಣದ ತಾಲ್ಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಸವಿತಾ ಸಮಾಜದ ವತಿಯಿಂದ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣನವರ ೮೮೯ನೇ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
೧೨ನೇ ಶತಮಾನ ಕ್ರಾಂತಿಕಾರಿಗಳ ಯುಗ, ಸಮಾಜ ಸುಧಾರಕರ ಹಾಗೂ ಕ್ರಾಂತಿಕಾರಿಗಳನ್ನು ನಾಡಿಗೆ ಸಮರ್ಪಿಸಿದ ಕಾಲ, ಬಸವಣ್ಣ, ಅಲ್ಲಮ, ಚನ್ನಬಸವ, ಅಕ್ಕಮಹಾದೇವಿ ಹಡಪದ ಅಪ್ಪಣ್ಣ ಸೇರಿದಂತೆ ಮೊದಲಾದ ನೂರಾರು ಶರಣರ ಯುಗವದು. ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಹಡಪದ ಅಪ್ಪಣ್ಣನವರು ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಹಡಪದ ಅಪ್ಪಣ್ಣ ಸೇರಿದಂತೆ ಬಸವಾಧಿ-ಶಿವಶರಣರು ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ಕಂದಾಚಾರ, ಮೂಢನಂಬಿಕೆಗಳ ವಿರುದ್ಧ ಹೋರಾಟ ಮಾಡಿದರು. ಇವರು ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ತಮ್ಮ ವಚನಗಳನ್ನೇ ಅಸ್ತ್ರಗಳನ್ನಾಗಿ ಬಳಸಿಕೊಂಡಿದ್ದು ಅವಿಸ್ಮರಣೀಯ. ಕನ್ನಡ ನಾಡಿನ ಸಾಂಸ್ಕೃತಿಕ, ಸಾಮಾಜಿಕ ಮತ್ತು ಧಾರ್ವಿ?ಕ ಪರಿವರ್ತನೆಗೆ ಕಾರಣವಾದ ಈ ಚಳವಳಿಯು ಸಮಾಜದ ಶೋಷಿತ ವರ್ಗದ ದಲಿತರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಿತು. ಆವರೆಗೆ ಸಾಹಿತ್ಯ ಕೇವಲ ಉನ್ನತ ವರ್ಗಕ್ಕೆ ಮೀಸಲಾಗಿದ್ದು ವ್ಯವಸ್ಥೆಯ ಬಹುಸಂಖ್ಯಾತರು ಉಪೇಕ್ಷೆಗೆ ಒಳಗಾಗಿದ್ದರು. ಇಂತಹ ಜನರ ಬದುಕಲ್ಲಿ ಹೊಸ ಗಾಳಿ ಬೀಸಿದಂತೆ ವಚನ ಚಳವಳಿ ಪ್ರವಹಿಸಿ ಜಗತ್ತಿನ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದಕ್ಕೆ ನಾಂದಿ ಹಾಡಿತು. ಅಪ್ಪಣ್ಣ ನವರು ೧೧೬೦ ಬಸವನಬಾಗೇವಾಡಿ ಸಮೀಪದ ಮಸಬಿನಾಳ ಎಂಬ ಗ್ರಾಮದಲ್ಲಿ ಚೆನ್ನವೀರಪ್ಪ, ಹಾಗೂ ದೇವಕಮ್ಮ ರವರ ಮಗನಾಗಿ ಜನಿಸಿದ ಇವರು ಕ್ಷೌರಿಕ ವೃತ್ತಿಯೊಂದಿಗೆ ಬಸವಣ್ಣನವರಿಗೆ ತಾಂಬೂಲವನ್ನು ತಯಾರು ಮಾಡಿಕೊಡುವ ಕಾಯಕವನ್ನೂ ನಿರ್ವಹಿಸುತ್ತಿದ್ದರು. ಇವರು ಬಸವಪ್ರಿಯ ಕೂಡಲ ಚೆನ್ನಬಸವಣ್ಣ ಎಂಬ ಅಂಕಿತನಾಮದಲ್ಲಿ ೨೫೦ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ. ಅಪ್ಪಣ್ಣನವರು ಅನುಭವ ಮಂಟಪದ ಕಾರ್ಯದರ್ಶಿಯಾಗಿ ಮತ್ತು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಕಾಯಕ ನಿರ್ವಹಿಸಿದರು. ಅವರ ಬಹುತೇಕ ವಚನಗಳು ಬೆಡಗಿನ ವಚನಗಳಾಗಿವೆ. ಇವರು ವಚನಗಳಲ್ಲಿ ಶರಣರಿಗಿರಬೇಕಾದ ಕಾಯಕನಿಷ್ಠೆ, ದಾಸೋಹ, ವೈರಾಗ್ಯ, ಭಕ್ತಿ, ಆಚಾರ- ವಿಚಾರಗಳನ್ನು ವಿಡಂಬಿಸಿ ಅಜ್ಞಾನಿಗಳನ್ನು ಸುಜ್ಞಾನಿಗಳನ್ನಾಗಿ ಮಾಡಲು ಯತ್ನಿಸಿದ್ದಾರೆ ಇವರೆಲ್ಲ ಸಮಸಮಾಜದ ನಿರ್ಮಾಣಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡುವ ಮೂಲಕ ಅಜರಾಮರರಾಗಿದ್ದಾರೆ. ಇಂಥ ದಾರ್ಶನಿಕರನ್ನು ಜಾತಿಗಯೊಳಗೆ ಬಂದಿಸಬಾರದು ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಆಯಿತನಹಳ್ಳಿ ಪ್ರಸನ್ನ, ಗೌರವಾಧ್ಯಕ್ಷ ನಾಗಣ್ಣ, ಉಪಾಧ್ಯಕ್ಷ ಮಹದೇವ್, ಮಾಜಿ ಅಧ್ಯಕ್ಷ ರಾದ ವೆಂಕಟೇಶ್, ಪಿ.ಸಿ.ಕೃಷ್ಣ, ಮುಖಂಡರಾದ ಸಣ್ಣಸ್ವಾಮಿ, ಕೃಷ್ಣ, ನಟೆಶ್, ಬೆಳತೂರು ಮನು, ಕಾಂತರಾಜು, ಆಹಾರ ಇಲಾಖೆ ಶಿರಸ್ಥೇದಾರ್ ಸಣ್ಣಸ್ವಾಮಿ, ಶಿರಸ್ಥೇದಾರ್ ನಂದಕುಮಾರ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೆಶಕ ಡಾ.ಸೋಮಯ್ಯ ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಡಾ.ವೈ.ಪ್ರಸಾದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular