Sunday, April 20, 2025
Google search engine

Homeಸ್ಥಳೀಯಪಟ್ಟಣದ ಅಭಿವೃದ್ದಿ ವಿಶೇಷ ಅನುದಾನಕ್ಕೆ ಮನವಿ

ಪಟ್ಟಣದ ಅಭಿವೃದ್ದಿ ವಿಶೇಷ ಅನುದಾನಕ್ಕೆ ಮನವಿ


ಕೆ.ಆರ್.ನಗರ: ಪಟ್ಟಣದ ಅಭಿವೃದ್ದಿಗಾಗಿ ಪುರಸಭೆಗೆ ವಿಶೇಷ ಅನುದಾನ ನೀಡುವಂತೆ ಪೌರಾಡಳಿತ ಸಚಿವ ರಹೀಂಖಾನ್‌ರವರಿಗೆ ಮನವಿ ಸಲ್ಲಿಸಲಾಗಿದ್ದು, ಮುಂದಿನ ೧೫ ದಿನಗಳ ಒಳಗೆ ಅನುದಾನ ಮಂಜೂರಾಗಲಿದೆ ಆನಂತರ ಅಗತ್ಯ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ನಗರದ ೧೭ನೇ ವಾರ್ಡಿನ ವರಸಿದ್ದಿ ವಿನಾಯಕ ಸೇವಾ ಸಮಿತಿಯ ೨೦ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪೌರಾಡಳಿತ ಇಲಾಖೆಯಿಂದ ಬರುವ ಅನುದಾನದಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾದ ಮತ್ತು ಹೊಸ ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಆದ್ಯತೆ ನೀಡುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈ ದೇವಾಲಯದ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಿ ಮತ್ತು ಹೈಮಾಸ್ಕ್ ದೀಪ ಅಳವಡಿಸಲು ಅನುದಾನ ನೀಡಲಾಗುತ್ತದೆ ಎಂದು ಭರವಸೆ ನೀಡಿದ ಶಾಸಕರು ಕನಕ ನಗರ, ಟೆಲಿಕಾಂ ಬಡಾವಣೆ, ಸಕ್ಕರೆ ನಗರದ ಜನತೆಗೆ ಎಲ್ಲಾ ರೀತಿಯ ಮೂಲಸೌಕರ್ಯ ಒದಗಿಸಲು ಬದ್ದನಾಗಿದ್ದು ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಹೊಸ ಬಡಾವಣೆಯಾಗಿರುವ ೧೭ನೇ ವಾರ್ಡಿನ ಅಭಿವೃದ್ದಿಗಾಗಿ ೧ ಕೋಟಿ ರೂಗಳನ್ನು ಬಿಜೆಪಿ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದ ಎಂಟಿಬಿ ನಾಗರಾಜ್‌ರವರು ಮಂಜೂರು ಮಾಡಿಸಿದ್ದರು, ಸ್ಥಳೀಯ ಶಾಸಕರಾಗಿದ್ದವರಿಂದ ರಾಜಕೀಯ ಕಾರಣಕ್ಕಾಗಿ ಅನುದಾನವನ್ನು ತಡೆ ಹಿಡಿಸಿದ್ದರು ಎಂದು ಮಾಹಿತಿ ನೀಡಿದ ಶಾಸಕ ಡಿ.ರವಿಶಂಕರ್ ಈ ಅನುದಾನವನ್ನು ಮತ್ತೆ ಬಿಡುಗಡೆ ಮಾಡಿಸಲಾಗಿದ್ದು ಇದರಿಂದ ಬಡಾವಣೆ ಸಮಗ್ರ ಅಭಿವೃದ್ದಿ ಕಾಣಲಿದೆ ಎಂದರು.
ಹೊಸ ಬಡಾವಣೆಗಳು ಸೇರಿದಂತೆ ಪುರಸಭೆಯ ಎಲ್ಲಾ ವಾರ್ಡ್‌ಗಳಲ್ಲೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿದ್ದು ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ಹೇಳಿದ ಶಾಸಕರು ನಮ್ಮ ಸರ್ಕಾರವೇ ರಾಜ್ಯದಲ್ಲಿ ಅಧಿಕಾರದಲ್ಲಿದ್ದು ನಗರದ ಜನತೆಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಪುರಸಭೆಯನ್ನು ನಗರ ಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೇಸ್ ಪಕ್ಷ ಚುನಾವಣಾ ಪೂರ್ವದಲ್ಲಿ ನೀಡಲಾದ ಐದು ಗ್ಯಾರಂಟಿಗಳನ್ನು ಈಡೇರಿಸಲು ಬದ್ದವಾಗಿದ್ದು ಈಗಾಗಲೇ ಗೃಹ ಜ್ಯೋತಿ ಮತ್ತು ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದು ಜನರ ಮೆಚ್ಚುಗೆ ಪಡೆಯುವಲ್ಲಿ ಸರ್ಕಾರ ಯಶಸ್ವಿಗೊಂಡಿದೆ, ಮೂರನೇ ಗ್ಯಾರಂಟಿ ಗೃಹ ಲಕ್ಷ್ಮಿಗೆ ಜೂನ್ ೨೭ರಿಂದ ಅರ್ಜಿ ಸಲ್ಲಿಸುವ ಮೂಲಕ ಮನೆಯೊಡತಿ ಇದರ ಲಾಭ ಪಡೆಯಬೇಕು ಎಂದು ಮನವಿ ಮಾಡಿದ ಶಾಸಕರು ಜುಲೈ ತಿಂಗಳಿನಿಂದ ಪಡಿತರ ದಾರರಿಗೆ ತಲಾ ೧೦ ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕೇಂದ್ರದ ಬಿಜೆಪಿ ಸರ್ಕಾರ ಅನಗತ್ಯ ತೊಂದರೆ ನೀಡಿದರೂ ಸಹ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುವುದರ ಜತೆಗೆ ಉತ್ತಮ ಆಡಳಿತ ನೀಡಲಿದೆ ಇದರಲ್ಲಿ ಜನತೆ ವಿಶ್ವಾಸ ಇಡಬೇಕು ಎಂದು ಕೋರಿದ ಶಾಸಕ ಡಿ.ರವಿಶಂಕರ್ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ಸಮಗ್ರ ಅಭಿವೃದ್ದಿ ಮಾಡಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ ಐದು ವರ್ಷಗಳ ಕಾಲ ಶಾಸಕರಾಗಿದ್ದವರು ತಾರತಮ್ಯ ರಾಜಕಾರಣ ಮಾಡಿದ್ದಕ್ಕಾಗಿ ೨೭,೨೪೨ ಮತಗಳ ಅಂತರದಿಂದ ಸೋಲು ಕಾಣಬೇಕಾಯಿತು, ತಾವು ಈ ರೀತಿಯ ರಾಜಕಾರಣ ಮಾಡಬಾರದು ಎಂದು ಸಲಹೆ ನೀಡಿದ್ದಲ್ಲದೆ ಸದಾ ಜನರೊಟ್ಟಿಗ್ಗಿದ್ದು ಎರಡು ತಾಲೂಕುಗಳಲ್ಲಿರುವ ಜನತೆಯ ಸಮಸ್ಯೆಯನ್ನು ಆಲಿಸುವಂತಾಗಬೇಕು ಯಾವುದೇ ಕಾರಣಕ್ಕೂ ಜಾತಿ ಕೇಳಿ ಕೆಲಸ ಮಾಡಬಾರದು ಎಂದು ಶಾಸಕ ಡಿ.ರವಿಶಂಕರ್‌ಗೆ ಕಿವಿ ಮಾತು ಹೇಳಿದರು.
ಜಿ.ಪಂ. ಮಾಜಿ ಸದಸ್ಯ ಜಿ.ಆರ್.ರಾಮೇಗೌಡ, ಹುಣಸೂರು ತಾಲೂಕು ಕುರುಬರ ಸಂಘದ ಅಧ್ಯಕ್ಷ ಕುನ್ನೇಗೌಡ, ಪುರಸಭೆ ಸದಸ್ಯ ನಟರಾಜು, ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಬಿ.ಎಂ.ನಾಗರಾಜು, ಕಾರ್ಯದರ್ಶೀ ಜವರೇಗೌಡ, ಸದಸ್ಯರಾದ ಪ್ರಕಾಶ್, ಎಸ್.ಬಸವರಾಜು, ಸಣ್ಣತಮ್ಮೇಗೌಡ, ಶಶಿಧರ್, ಪಿ.ಪ್ರಶಾಂತ್, ಸುಬ್ಬೇಗೌಡ, ಮಣಿಯಮ್ಮ, ಪುಟ್ಟೇಗೌಡ, ಬಿ.ಆರ್.ನಂದೀಶ್, ಬೋರಲಿಂಗೇಗೌಡ, ಜಗದೀಶ್, ಲೋಕೇಶ್, ಪರಶಿವಮೂರ್ತಿ, ವೆಂಕಟೇಶ್, ಬ್ರಾಂಡ್‌ಮಂಜು, ಡಿ.ಜಿ.ಕಿರಣ್, ಚೇತನ್‌ಶೆಟ್ಟಿ, ಪ್ರದೀಪ್(ದೀಪು), ಧೃವರಾಜ್, ಪ್ರಮೋದ್, ಕೃಷ್ಣೇಗೌಡ, ನಾಗರಾಜು ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular