Monday, December 2, 2024
Google search engine

Homeಸ್ಥಳೀಯಮೈಸೂರು ಪೂರ್ವವಲಯ ಬಡಾವಣೆಗಳ ಅಭಿವೃದ್ಧಿಗೆ ಆದ್ಯತೆ ನೀಡಲು ಮನವಿ

ಮೈಸೂರು ಪೂರ್ವವಲಯ ಬಡಾವಣೆಗಳ ಅಭಿವೃದ್ಧಿಗೆ ಆದ್ಯತೆ ನೀಡಲು ಮನವಿ

ಮೈಸೂರು: ಈ ನಾಡು ಕಂಡ ಪ್ರಭಾವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯವರೇ ಆಗಿದ್ದು, ಪ್ರಾತಿನಿಧಿಕವಾಗಿ ಪ್ರಮುಖರೂ ಆಗಿರುವುದರಿಂದ ಮೈಸೂರು ನಗರದ ಸಮಗ್ರ ಅಭಿವೃದ್ಧಿಗೆ ಪ್ರಮುಖ ಆದ್ಯತೆ ನೀಡಬೇಕೆಂದು ಮೈಸೂರು ಪೂರ್ವವಲಯ ಬಡಾವಣೆಗಳ
ಒಕ್ಕೂಟ ಆಗ್ರಹಿಸಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎ.ಎಂ.ಬಾಬು, ರಾಜ್ಯದ ಬೆಳೆಯುತ್ತಿರುವ ನಗರಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಮೈಸೂರು ನಗರಕ್ಕೆ ಸಾಂಸ್ಕೃತಿಕ, ಪಾರಂಪರಿಕ ಹಾಗೂ ನಿವೃತ್ತರ ನಗರ ಎಂಬ ಖ್ಯಾತಿ ಇದ್ದರೂ ಸಮಸ್ಯೆಗಳಿಂದ ಹೊರತಾಗಿಲ್ಲವಾದ್ದರಿಂದ ಮುಖ್ಯಮಂತ್ರಿಗಳು ತಮಗಿರುವ ಪರಮಾಧಿಕಾರ ಬಳಿಸಿ‌ ಮೈಸೂರು ನಗರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಮನವಿ ಮಾಡಿದರು.

ದಿನಕಳೆದಂತೆ ಮೈಸೂರು ನಗರದ ವಿಸ್ತೀರ್ಣ ಹೆಚ್ಚುತ್ತಿದ್ದು, ಜನವಸತಿ ಪ್ರದೇಶಗಳು ಕೂಡ ನಿರೀಕ್ಷೆಗೂ ಮೀರಿ ನೆಲೆಗೊಂಡಿವೆ. ಇಂತಹ ಹೊತ್ತಿನಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿದಲ್ಲಿ ಮೈಸೂರು ಕನಸಿನ ನಗರವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ‌ಈ‌ ಸಲುವಾಗಿಯೇ ಮೈಸೂರು ಪೂರ್ವವಲಯ ಬಡಾವಣೆಗಳ ಒಕ್ಕೂಟ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಈಗಾಗಲೇ ಹಲವು ಬಾರಿ ಮೈಸೂರು ನಗರಕ್ಕೆ ಅಗತ್ಯವಿರುವ ಯೋಜನೆಗಳ ಅನುಷ್ಠಾನ ಸಂಬಂಧ ಮನವಿ ಸಲ್ಲಿಸಿದ್ದರೂ ಈವರೆಗೆ ನಿರೀಕ್ಷಿತ ಮಟ್ಟದಲ್ಲಿ ಫಲ ನೀಡಿಲ್ಲ ಎಂದು ಹೇಳಿದರು.

ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟ ವ್ಯಾಪ್ತಿಯಲ್ಲಿ 27 ಬಡಾವಣೆಗಳಿದ್ದು, ನಿತ್ಯ ಒಂದಿಲ್ಲೊಂದು ಸಮಸ್ಯೆಗಳಿಂದ ನರಳುತ್ತಿವೆ. ಆದಕಾರಣ, ಮತ್ತೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಲಾದರೂ ಈ ಬಡಾವಣೆಗಳಿಗೆ ಆದ್ಯತಾನುಸಾರ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕೆಂದು ಮನವಿ ಮಾಡಿದರು. ಪತ್ರಿಕಾಗೋಷ್ಟಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಆರ್. ನರಸಿಂಹಯ್ಯ, ಶಿವಕುಮಾರಸ್ವಾಮಿ, ಸಿದ್ದು, ಡಿ.ಆರ್.ಜಯಸ್ವಾಮಿ, ಸಿದ್ದರಾಜೇಗೌಡ, ಬೊಮ್ಮೇಗೌಡ, ಶಿವಣ್ಣ, ಥಾಮಸ್

  • ಒಕ್ಕೂಟದ ಬೇಡಿಕೆಗಳು:
  • ನಮ್ಮ ಬಡಾವಣೆಗಳ ನಿವಾಸಿಗಳು ವ್ಯಾಪಕ ಪ್ರಮಾಣದ ಗಡುಸು ನೀರು ಸೇವಿಸುತ್ತಿರುವುದರಿಂದ ಆರೋಗ್ಯದ
    ಮೇಲೆ ತೀವ್ರತರವಾದ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ತ್ವರಿತವಾಗಿ ಕಾವೇರಿ ಅಥವಾ ಕಬಿನಿ ನೀರಿನ ವ್ಯವಸ್ಥೆ ಕಲ್ಪಿಸಬೇಕು.
  • ಬಡಾವಣೆಗಳ ನಿರ್ಮಾಣದ ವೇಳೆ ಇದ್ದ ರಾಜಕಾಲುವೆಗಳು ಕಸದಿಂದ ತುಂಬಿರುವುದು ಒಂದೆಡೆಯಾದರೆ, ಕೆಲ ಆಸೆಕೋರರಿಂದ ಒತ್ತುವರಿ ಆಗಿವೆ. ಅವುಗಳ ತೆರವು ಕಾರ‍್ಯ ಆಗಬೇಕು.
  • ಈಗಾಗಲೇ ಅನುಷ್ಠಾಗೊಂಡಿರುವ ಯೋಜನೆಗಳು ಆಮೆವೇಗದಲ್ಲಿ ಸಾಗುತ್ತಿದ್ದು, ಅವುಗಳನ್ನು ತ್ವರಿತವಾಗಿ
    ಪೂರ್ಣಗೊಳಿಸಲು ಸಂಬಂಧಪಟ್ಟವರಿಗೆ ನಿರ್ದೇಶಿಸಬೇಕು.
  • ಅಮೃತ ಯೋಜನೆ ಹಾಗೂ ಜಲಜೀವನ್ ಮಿಷನ್ ಯೋಜನೆಯನ್ನು ಒಕ್ಕೂಟ ವ್ಯಾಪ್ತಿಯ ಬಡಾವಣೆಗಳಲ್ಲಿ
    ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು.
  • ಕೆಲ ಯೋಜನೆಗಳಿಗೆ ಸರ್ಕಾರ ಕಾರ‍್ಯಾದೇಶ ನೀಡಿದ್ದರೂ, ಟೆಂಡರ್ ಪ್ರಕ್ರಿಯೆ ತಡವಾಗಿ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ. ಈ ಸಮಸ್ಯೆ ನಿವಾರಿಸಬೇಕು.
  • ಒಕ್ಕೂಟ ವ್ಯಾಪ್ತಿಯ ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳ ಸುಪರ್ದಿಗೆ ನೀಡುವ ವೇಳೆ ಮಾಡಿಕೊಂಡಿರುವ
    ಒಪ್ಪಂದದ ಸಮರ್ಪಕ ಅನುಷ್ಠಾನ ಆಗಬೇಕು
  • ತಕ್ಷಣದ ಮಟ್ಟಿಗೆ ಖಾಸಗಿ ಬಡಾವಣೆಗಳ ವಿದ್ಯುತ್ ನಿರ್ವಹಣಾ ವೆಚ್ಚವನ್ನು ಹಾಗೂ ನೀರಿನ ಸಮರ್ಪಕ ನಿರ್ವಹಣೆಯ ಹೊಣೆಯನ್ನು ಬಡಾವಣೆ ನಿರ್ಮಾಣ ಮಾಡಿದ ಮಾಲೀಕರೇ ನಿರ್ವಹಿಸುವಂತೆ ಆದೇಶಿಸಬೇಕು.
  • ಬಡಾವಣೆ ನಿರ್ಮಾಣದ ವೇಳೆ ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆ
    ಹಾಗೂ ರಾಜಕಾಲುವೆಯ ಮುಖೇನ ಕೊಳಚೆ ನೀರು ಸಾಗುತ್ತಿರುವುದರಿಂದ ಇಡೀ ಬಡಾವಣೆ ಕಲುಷಿತಗೊಂಡಿದೆ. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ತ್ವರಿತ ಕ್ರಮ ತೆಗೆದುಕೊಳ್ಳಬೇಕು.
  • ಹಂಚ್ಯಾ ಸಾತಗಳ್ಳಿ ಬಡಾವಣೆಯ ‘ಬಿ’ ವಲಯದಲ್ಲಿ ವೀರಪ್ಪನ್ ಕಾರ‍್ಯಾಚರಣೆಯಲ್ಲಿ ಕಾರ್ಯ ನಿರ್ವಹಿಸಿದ ಸಿಬ್ಬಂದಿಗಳೇ ಹೆಚ್ಚಿದ್ದು, ಮಳೆ ನೀರು ಹಾಗೂ ವಿಟಿಯು ಸಂಸ್ಥೆಯ ಕಲುಷಿತ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಇದು ಅಲ್ಲಿನ ನಿವಾಸಿಗಳಿಗೆ ನಿತ್ಯ ಕಂಟಕವಾಗಿದೆ. ಮಾತ್ರವಲ್ಲ, ಈ ನೀರು ಕೊಳವೆ ಬಾವಿಗೆ ಸೇರುವ ಮೂಲಕ
    ಅಂತರ್ಜಲ ಮಲಿನಗೊಳ್ಳುತ್ತಿದೆ. ಇದರೊಟ್ಟಿಗೆ ಹಂಸ ಕೆಫೆ ಬಳಿ ಇರುವ ರಾಜಕಾಲುವೆಯೂ
    ಅವೈಜ್ಞಾನಿಕವಾಗಿರುವುದರಿಂದ ಮಳೆಗಾಲದಲ್ಲಿ ನೀರು ಹೆಚ್ಚುವರಿಯಾಗಿ ರಸ್ತೆ ಮೇಲೆ ಹರಿಯುತ್ತದೆ. ಅದನ್ನು ಕೂಡ
    ಸರಿಪಡಿಸುವ ಕೆಲಸ ಆಗಬೇಕಿದೆ.
  • ಒಕ್ಕೂಟ ವ್ಯಾಪ್ತಿಯಲ್ಲಿ ಅಂದಾಜು ಹದಿನೈದು ಸಾವಿರಕ್ಕೂ ಹೆಚ್ಚು ಮಂದಿ ಶಾಶ್ವತವಾಗಿ ನೆಲೆಸಿರುವುದರಿಂದ ಸರ್ಕಾರಿ ಶಾಲೆ, ಆಸ್ಪತ್ರೆ, ಅಂಚೆ ಕಚೇರಿ, ಆಟದ ಮೈದಾನದ ವ್ಯವಸ್ಥೆ ಕಲ್ಪಿಸಬೇಕು.
  • ನಮ್ಮ ಬಡಾವಣೆಗಳು ಹೊರವರ್ತುಲ ರಸ್ತೆಯಿಂದ ಹೊರಭಾಗದಲ್ಲಿರುವುದರಿಂದ ನಗರ ಸಾರಿಗೆ ವ್ಯವಸ್ಥೆಯನ್ನು ನಮ್ಮ ಬಡಾವಣೆಗಳಿಗೆ ವಿಸ್ತರಿಸಬೇಕು.
  • ರಾಜ್ಯ ಸರ್ಕಾರದ ಮಟ್ಟದಲ್ಲಿ ಮೈಸೂರು ನಗರವನ್ನು ಬೃಹತ್ ಮೈಸೂರು ಮಹಾನಗರಪಾಲಿಕೆಯಾಗಿ
    ಮೇಲ್ದರ್ಜೆಗೇರಿಸುವ ಪ್ರಸ್ತಾವ ಇದ್ದು, ಈ ವೇಳೆ ನಮ್ಮ ಬಡಾವಣೆಗಳನ್ನು ಕೂಡ ಈ ವ್ಯಾಪ್ತಿಯಲ್ಲಿ ತರಬೇಕು.
  • ಮೈಸೂರು ನಗರದಲ್ಲಿ ನೂರಾರು ಸಂಖ್ಯೆಯಲ್ಲಿದ್ದ ಕೆರೆಗಳು ಇಂದು ಬೆರಳೆಣಿಕೆಯಷ್ಟು ಸಂಖ್ಯೆಗೆ ಬಂದು ನಿಂತಿವೆ. ಇಂತಹ ಹೊತ್ತಿನಲ್ಲಿ ಕೆರೆಗಳನ್ನು ಉಳಿಸಬೇಕಾದ ಅನಿವಾರ‍್ಯತೆ ಇರುವುದರಿಂದ ಪೊಲೀಸ್ ಬಡಾವಣೆಗೆ
    ತಾಕಿಕೊಂಡಂತಿರುವ ತಿಪ್ಪಯ್ಯನ ಕೆರೆಯನ್ನು ಸಂರಕ್ಷಿಸಬೇಕು.
  • ಹೊರವರ್ತುಲ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚಾಗಿದ್ದು, ನಿತ್ಯ ಅಪಘಾತ ಸಂಭವಿಸಿ ಪ್ರಾಣಹಾನಿ ಸಂಭವಿಸುತ್ತಿವೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ವೇಗ ನಿಯಂತ್ರಣ ಅಳವಡಿಸಬೇಕು.
  • ಬಡಾವಣೆಗಳು ರಾತ್ರಿ ವೇಳೆ ಬಹುತೇಕ ನಿರ್ಜನವಾಗಿರುವುದರಿಂದ ಕಳ್ಳಕಾಕರ ಹಾವಳಿ ಮತ್ತು ಅನೈತಿಕ ಚಟುವಟಿಕೆ ಹೆಚ್ಚಾಗಿದೆ. ಮಾತ್ರವಲ್ಲ, ಮದ್ಯವ್ಯಸನಿಗಳು ಹಾಗೂ ಮಾದಕಪದಾರ್ಥ ಸೇವಿಸುವವರು ನಮ್ಮ ಬಡಾವಣೆಗಳನ್ನು
    ಅವರ ಕಾರಸ್ಥಾನವಾಗಿ ಮಾಡಿಕೊಂಡಿರುವುದರಿಂದ ಪೊಲೀಸ್ ಇಲಾಖೆ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು.
RELATED ARTICLES
- Advertisment -
Google search engine

Most Popular