ಮೈಸೂರು: ಮನುವಾದಿಗಳು ಮೊದಲಿಂದಲೂ ಇತಿಹಾಸದಿಂದ ಬಹುಜನರನ್ನು ದೂರ ಇಟ್ಟಿದ್ದರು. ಕಳೆದ ೧೦ ವರ್ಷಗಳಿಂದ ಇತಿಹಾಸ ತಿರುಚುವ ಕೆಲಸ ಬಹಳಷ್ಟಾಯಿತು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ಸಂಶೋಧನಾ ವಿದ್ಯಾರ್ಥಿ ವೇದಿಕೆ ವತಿಯಿಂದ ಮಾನಸಗಂಗೋತ್ರಿ ಬಿಎಂಶ್ರೀ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೨೩ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಇತಿಹಾಸದಲ್ಲಿ ಇಲ್ಲದ ಉರಿಗೌಡ, ನಂಜೇಗೌಡ ಪಾತ್ರಗಳು ಬಾಹುಬಲಿಯಂತೆ ಬಂದವು. ಆದರೆ, ಇತಿಹಾಸದಲ್ಲಿ ದಾಖಲಾಗಿರುವ ದಲಿತ ಪ್ರಥಮ ವಿದ್ಯಾಗುರು ತಲಕಾಡು ರಂಗೇಗೌಡ, ಮನುವಾದಿಗಳ ವಿರುದ್ಧ ಹೋರಾಟ ಮಾಡಿದ ಸಿದ್ದಪ್ಪ ಕಂಬಳಿ ಅವರ ಹೆಸರೇ ಇಲ್ಲ. ಇವರ ಬಗ್ಗೆ ಹೆಚ್ಚು ಚರ್ಚೆ ಮಾಡಬೇಕು ಎಂದರು.
ನೂತನ ಶಿಕ್ಷಣ ನೀತಿಯನ್ನು ಮುಂದಿಟ್ಟುಕೊಂಡು ಹಿಂದಿನ ಸರ್ಕಾರ ಪಠ್ಯದಲ್ಲಿ ಬದಲಾವಣೆ ಮಾಡಿತು. ಕರ್ನಾಟಕದಲ್ಲಿ ತರಾತುರಿಯಲ್ಲಿ ಎನ್‌ಇಪಿ ಜಾರಿ ಮಾಡಿದರು. ಈಗ ನಮ ಸರ್ಕಾರದಲ್ಲಿ ನಮ ಮಕ್ಕಳ ಭವಿಷ್ಯಕ್ಕೆ ಒಳ್ಳೆಯದಾಗುವ ಪಠ್ಯವನ್ನು ಅಳವಡಿಸುತ್ತೇವೆ. ಮುಂದಿನ ದಿನಗಳಲ್ಲಿ ಒಳ್ಳೇಯದಾಗುತ್ತದೆ ಎಂದರು. ಧರ್ಮ, ಜಾತಿ ಆಧಾರದ ಮೇಲಿನ ಕೆಲಸಗಳನ್ನು ತಿರಸ್ಕಾರ ಮಾಡಬೇಕು. ಹೊಸ ಟೆಕ್ನಾಲಜಿಗೆ ತೆರೆದುಕೊಳ್ಳಬೇಕು. ಮೂಢನಂಬಿಕೆಯಿಂದ ಹೊರಬರಬೇಕು. ತಮ ಅಭಿವೃದ್ಧಿಗೊಂಡು ತಮ ಸುತ್ತಲಿನ ಜನರನ್ನು ಮೇಲೆತ್ತುವ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು. ಎಸ್‌ಸಿ, ಎಸ್‌ಟಿ ಜನರು ಮಾತ್ರ ದಲಿತರಲ್ಲ. ಸಮಾಜದಲ್ಲಿ ಶೋಷಣೆಗೆ ಒಳಗಾದ ಪ್ರತಿಯೊಬ್ಬರು ದಲಿತರು. ಅಂಬೇಡ್ಕರ್ ಅನುಭವಿಸಿದ ಅವಮಾನ, ನಡೆಸಿದ ಹೋರಾಟ, ಚಿಂತನೆ ಎಲ್ಲವನ್ನೂ ಜನರಿಗೆ ತಿಳಿಸಬೇಕು. ಹಲವು ಕ್ಷೇತ್ರಗಳಿಗೆ ನೀಡಿದ ಕೊಡುಗೆಯನ್ನು ಸರಿಸಬೇಕು ಎಂದು ನುಡಿದರು.
ವಿದ್ವಾಂಸ ಪ್ರೊ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ಅಂಬೇಡ್ಕರ್ ಭಾರತೀಯ ಸಂಸ್ಕೃತಿಗೆ ವ್ಯಾಖ್ಯಾನ ಬರೆದರು. ಸಂವಿಧಾನ ಬಂದ ಮೇಲೆ ನಾಗರಿಕರಾದೇವು. ೨ ಸಾವಿರ ಇತಿಹಾಸವಿರುವ ಭವ್ಯ ಭಾರತದ ಬಗ್ಗೆ ಅಭಿಮಾನವಿದೆ. ಆದರೆ, ಕೊನೇಯ ವ್ಯಕ್ತಿ ಮತ್ತು ರಾಷ್ಟ್ರಪತಿ ಒಂದೇ ಚೌಕಟ್ಟಿಗೆ ಬರುವಂತೆ ಮಾಡಿದ್ದು ಭಾರತದ ಸಂವಿಧಾನ. ಅದನ್ನು ಆಗು ಮಾಡಿದ್ದು ಅಂಬೇಡ್ಕರ್ ಎಂದರು.
ಸಂವಿಧಾನ ರಕ್ಷಿಸಿಕೊಳ್ಳುವುದರಿಂದ ನಮ ಭವಿಷ್ಯ ಇದೆ. ಸಂವಿಧಾನ ಬಿಡುವುದೆಂದರೆ ೮ನೇ ಶತಮಾನಕ್ಕೆ ಹೋಗುವುದು. ಮನುಸತಿ ರಚಿಸಿದ ಶಂಭೂಕನ ಕೊಲೆ ಮಾಡಿದ ಕಾಲಕ್ಕೆ ಹೋಗುವುದು. ಆದರೆ, ನನ್ನ ಕೊನೆ ಉಸಿರು ಇರುವ ತನಕವೂ ಸಂವಿಧಾನ ರಕ್ಷಣೆಗೆ ಶ್ರಮಿಸುತ್ತೇನೆ ಎಂದರು.
ರಾಮಾಯಣದಲ್ಲಿ ಶಂಭೂಕ ವಧೆಯನ್ನು ೮ನೇ ಶತಮಾನದಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಅದೇ ಶತಮಾನದಲ್ಲಿ ಮನುಸತಿ ರಚಿತವಾಗಿದೆ. ಇದು ಉರಿಗೌಡ, ನಂಜೇಗೌಡ ಪಾತ್ರಗಳನ್ನು ಸೃಷ್ಟಿಸಿ ಟ್ರೋಲ್ ಮಾಡಿದವರ ಅಭಿಪ್ರಾಯವಲ್ಲ. ಆದರೆ, ಎರಡರ ಉದ್ದೇಶ ಶ್ರೇಣಿಕರಣ ಕಾಪಾಡಿಕೊಂಡಿದೆ ಎಂದರು.
ಅಂಬೇಡ್ಕರ್ ಅವರು ೧೯೪೪ರಲ್ಲಿ ಆ ಕಾಲದ ಹಿಂದೂ ಮಹಾಸಭಾಕ್ಕೆ ಪತ್ರ ಬರೆದಿದ್ದಾರೆ. ಎಲ್ಲ ಹಿಂದೂಗಳಿಗೂ ಅನ್ವಯವಾಗುವ ಧರ್ಮ ಗ್ರಂಥ ಬರೆಯುವಂತೆ ಸವಾಲು ಹಾಕಿದ್ದಾರೆ. ಆದರೆ, ಇವತ್ತಿನ ತನಕ ಅದಕ್ಕೆ ಯಾರೂ ಉತ್ತರ ಕೊಟ್ಟಿಲ್ಲ ಎಂದು ತಿಳಿಸಿದರು.
ದೇಶದ ಬಗ್ಗೆ ಗಾಂಧೀಜಿಗೆ ತಿಳವಳಿಕೆ ಇತ್ತು. ಇಡೀ ಸಮಾಜವನ್ನು ಸಮನ್ವಯದ ದೃಷ್ಟಿಯಿಂದ ನೋಡಿದರು. ಒಳಗಿನ ಸಂಘರ್ಷ ಗೌಣಗೊಳಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಆದ್ಯತೆ ಕೊಟ್ಟರು. ದುಂಡು ಮೇಜಿನ ಪರಿಷತ್ತಿನ ಸಭೆಗೆ ಹೋದಾಗ ದಲಿತರ ಪರವಾಗಿ ಬಂದಿದ್ದೇನೆ ಎಂದರು. ದಲಿತರಿಗೆ ದೇಶ ಎಲ್ಲಿದೆ? ಎಂಬ ಅಂಬೇಡ್ಕರ್ ಪ್ರಶ್ನೆಗೆ ಮರುಗಿದರು. ಕರಗಿದರು. ಅಂಬೇಡ್ಕರ್-ಗಾಂಧಿ ಎರಡು ಶಕ್ತಿಗಳನ್ನು ಒಂದಾಗಿ ಮುನ್ನಡೆಸುವುದು ಅನಿವಾರ್ಯ ಮತ್ತು ಅಗತ್ಯ ಎಂದು ತಿಳಿಸಿದರು.
ಹೋರಾಟಗಾರ್ತಿ, ರಂಗಕರ್ಮಿ ದು.ಸರಸ್ವತಿ ಮಾತನಾಡಿ, ಬಿ.ಆರ್. ಅಂಬೇಡ್ಕರ್ ಅವರು ೧೩೨ನೇ ವರ್ಷ ಮಾತ್ರವಲ್ಲ. ೧೧೩೨ನೇ ವರ್ಷಕ್ಕೂ ಪ್ರಸ್ತುತವಾಗಿರುತ್ತಾರೆ. ನಾಳೆಗಳಿಗೆ ನಿರಂತರ ಸ್ಫೂರ್ತಿಯಾಗಿ ಇರುತ್ತಾರೆ. ದಮನಿತರು, ದಲಿತರು ಮಾತ್ರವಲ್ಲದೇ ಹೆಣ್ಣು ಮಕ್ಕಳಿಗೂ ದನಿಯಾದರೆಂಬ ಕಾರಣಕ್ಕೆ ಅಂಬೇಡ್ಕರ್ ಅವರ ಕುರಿತಾಗಿ ಬಹುದೊಡ್ಡ ಹೆಮೆ ಇದೆ ಎಂದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ. ವಿಜಯಕುಮಾರಿ ಎಸ್.ಕರಿಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಕೆ.ಹರೀಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ಕುಲಸಚಿವೆ ವಿ.ಆರ್.ಶೈಲಜಾ, ರಂಗಕರ್ಮಿ ದು.ಸರಸ್ವತಿ ಉಪಸ್ಥಿತರಿದ್ದರು. ಡಾ.ಎನ್.ಕೆ.ಲೋಲಾಕ್ಷಿ ಸ್ವಾಗತಿಸಿದರು. ಡಾ.ಯೋಗೀಶ್ ಎನ್. ಸಂವಿಧಾನ ಪ್ರಾಸ್ತಾವನೆ ಓದಿದರು.
ಅಂಬೇಡ್ಕರ್ ಅವರ ಬುದ್ಧ ಮತ್ತು ಆತನ ಧಮ, ಸಂವಿಧಾನ ಬೇರ ಬೇರೆಯಲ್ಲ. ನವಯಾನದ ಮೂಲಕ ಬುದ್ಧ ಧರ್ಮಕ್ಕೆ ಹೊಸ ರೂಪಕೊಟ್ಟಿದ್ದಾರೆ. ಬುದ್ಧ ಧಮ ಓದಿದರೆ ಮಹಾಕಾವ್ಯ ಓದಿದ ಅನುಭವವಾಗುತ್ತದೆ. ಅಂಬೇಡ್ಕರ್ ಅವರ ಕವಿ ಹೃದಯವೂ ತಿಳಿಯುತ್ತದೆ. ಸಂವಿಧಾನದ ಆಚೆಗೆ ಅಂಬೇಡ್ಕರರ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಗುರುತಿಸಿ ಮುನ್ನೆಲೆಗೆ ತರಬೇಕಿದೆ.
-ಪ್ರೊ.ವಿಜಯಲಕ್ಷ್ಮೀ ಎಸ್.ಕರಿಕಲ್ಮಹಿಳೆಯರ ಉಚಿತ ಬಸ್ ಲೇವಡಿ ಮಾಡುವುದನ್ನು ಗಮನಿಸಿದರೆ ನಾಚಿಕೆ ಅನ್ಸುತ್ತೆ. ಉಚಿತ ಪ್ರಯಾಣವೂ ಮಹಿಳೆಯರಿಗೆ ಅಡುಗೆ ಮನೆಯಿಂದ ಗಂಡನಿಂದ ಬಿಡುಗಡೆ ಸಿಕ್ಕಿದೆ. ಮಹಿಳೆಯರು ಯಾರ ಮುಲಾಜಿಲ್ಲದೇ ತಮ ಇಷ್ಟದ ಯಾತ್ರ ಸ್ಥಳಗಳಿಗೆ ಪ್ರಯಾಣಿಸುತ್ತಿದ್ದಾರೆ. ಮಹಿಳೆಯರಿಗೆ ನೀಡಲಿರುವ ೨ ಸಾವಿರ ಹಣದಿಂದ ಮನೆ, ಸಮಾಜ ಏಳ್ಗೇಯಾಗುತ್ತದೆ.
-ದು.ಸರಸ್ವತಿ