ಹೊಸದಿಲ್ಲಿ: ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿ ಕೇಂದ್ರ ಸರಕಾರ ಹೊರಡಿಸಿರುವ ಅಧಿಸೂಚನೆ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ತರಾತುರಿಯಲ್ಲಿ ತೆಗೆದುಕೊಂಡ ನಿರ್ಧಾರ ಎಂದು ಟೀಕಿಸಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ತರಾತುರಿಯಲ್ಲಿ ಕೇಂದ್ರ ಸರಕಾರ ಹೊಸ ಸಿಇಸಿ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಇದು ನಮ್ಮ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಚುನಾವಣಾ ಪ್ರಕ್ರಿಯೆ ಪವಿತ್ರವಾಗಿರಲು, ಸಿಇಸಿ ನಿಷ್ಪಕ್ಷಪಾತ ಪಾಲುದಾರರಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಹಲವು ಬಾರಿ ಪುನರುಚ್ಚರಿಸಿದೆ ಎಂದು ಹೇಳಿದ್ದಾರೆ.
ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ತಿದ್ದುಪಡಿ ಕಾನೂನು ʼಮುಖ್ಯ ಚುನಾವಣಾ ಆಯುಕ್ತರʼ ಆಯ್ಕೆ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಅವರನ್ನು ಹೊರಗಿಟ್ಟಿದೆ. ಈ ಕುರಿತ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿರುವ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಫೆಬ್ರವರಿ 19ಕ್ಕೆ ವಿಚಾರಣೆಗೆ ನಿಗದಿಪಡಿಸಲಾಗಿತ್ತು. ಅಲ್ಲಿಯವರೆಗೆ ಕಾಯಬೇಕಿತ್ತು ಎಂದು ಅವರು ಹೇಳಿದ್ದಾರೆ.
ತರಾತುರಿಯಲ್ಲಿ ಸಭೆ ನಡೆಸಿ ನೂತನ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸುವ ಅವರ ನಿರ್ಧಾರವು, ಸುಪ್ರೀಂ ಕೋರ್ಟ್ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಮತ್ತು ಸ್ಪಷ್ಟ ಆದೇಶ ಬರುವ ಮೊದಲು ನೇಮಕಾತಿ ಮಾಡಲು ಅವರು ಉತ್ಸುಕರಾಗಿದ್ದಾರೆ ಎಂಬುವುದನ್ನು ತೋರಿಸುತ್ತದೆ. ಇಂತಹ ಅತಿರೇಕದ ನಡವಳಿಕೆಯು ಆಡಳಿತಾರೂಢ ಸರಕಾರ ಚುನಾವಣಾ ಪ್ರಕ್ರಿಯೆಯನ್ನು ಹೇಗೆ ನಾಶಪಡಿಸುತ್ತಿದೆ ಮತ್ತು ಅದರ ಲಾಭಕ್ಕಾಗಿ ನಿಯಮಗಳನ್ನು ಹೇಗೆ ಬದಲಿಸುತ್ತದೆ ಎಂಬುದನ್ನು ಬಹಿರಂಗಗೊಳಿಸುತ್ತದೆ ಎಂದು ಹೇಳಿದ್ದಾರೆ.