ಪಿರಿಯಾಪಟ್ಟಣ: ಬಿಎಸ್ ಪಿ ಪಕ್ಷದ ತಾಲೂಕು ಘಟಕಕ್ಕೆ ನೂತನವಾಗಿ ವಿವಿಧ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಬಿಎಸ್ ಪಿ ಜಿಲ್ಲಾಧ್ಯಕ್ಷ ಬಿ.ಆರ್ ಪುಟ್ಟಸ್ವಾಮಿ ಅವರು ಮಾತನಾಡಿ ತಾಲ್ಲೂಕಿನಲ್ಲಿ ಬಿಎಸ್ ಪಿ ಪಕ್ಷವನ್ನು ಗಟ್ಟಿಗೊಳಿಸುವ ಮೂಲಕ ಶೋಷಿತರು ಮತ್ತು ದೀನ ದಲಿತರ ಧ್ವನಿಯಾಗಿ ಸಂಘಟನೆಯಲ್ಲಿ ತೊಡಗಿಕೊಳ್ಳಲು ಪಕ್ಷಕ್ಕೆ ನೂತನವಾಗಿ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.
ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಹಳೆಯ ಮುಖಗಳನ್ನು ಜನರು ನೋಡಿ ಬೇಸತ್ತಿದ್ದು ಬದಲಾವಣೆ ಬಯಸುತ್ತಿದ್ದಾರೆ ಇದನ್ನು ಅರ್ಥ ಮಾಡಿಕೊಂಡು ನಾವು ಪಕ್ಷವನ್ನು ಯಶಸ್ವಿಯಾಗಿ ಸಂಘಟಿಸಿದರೆ ಅಧಿಕಾರ ಹಿಡಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಿ ಶುಭ ಕೋರಿದರು.
ನೂತನ ಪದಾಧಿಕಾರಿಗಳು: ತಾಲ್ಲೂಕು ಅಧ್ಯಕ್ಷರಾಗಿ ಬೆಕ್ಯಾ ದೇವೇಂದ್ರ ಕುಮಾರ್, ಜಿಲ್ಲಾ ಕಾರ್ಯದರ್ಶಿಯಾಗಿ ಶಶಿಕುಮಾರ್, ಸಂಯೋಜಕರಾಗಿ ಸ್ವಾಮಿ, ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್, ಖಜಾಂಚಿಯಾಗಿ ಜಯರಾಮ್, ಉಪಾಧ್ಯಕ್ಷರಾಗಿ ಟಿ.ಬಿ ಪುಟ್ಟಣ್ಣ, ಬಿವಿಎಫ್ ಮುಖಂಡರಾಗಿ ಬಿ.ಮಂಜುನಾಥ್, ಅಪ್ಪು ಅವರನ್ನು ನೇಮಕ ಮಾಡಲಾಯಿತು, ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಭರತ್ ಕುಮಾರ್ ಗೌಡ ಹಾಗು ಕಾರ್ಯಕರ್ತರು ಇದ್ದರು.