Friday, April 11, 2025
Google search engine

Homeಅಪರಾಧಕಾನೂನುಸುಪ್ರೀಂ ಕೋರ್ಟ್‌ ಗೆ ಇಬ್ಬರು ಹೊಸ ನ್ಯಾಯಮೂರ್ತಿಗಳ ನೇಮಕ

ಸುಪ್ರೀಂ ಕೋರ್ಟ್‌ ಗೆ ಇಬ್ಬರು ಹೊಸ ನ್ಯಾಯಮೂರ್ತಿಗಳ ನೇಮಕ

ನವದೆಹಲಿ: ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್‌ ಹಾಗೂ ನ್ಯಾಯಮೂರ್ತಿ ಆರ್. ಮಹದೇವನ್ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಕೇಂದ್ರ ಸರ್ಕಾರ ಮಂಗಳವಾರ ಅನುಮತಿ ನೀಡಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್, ‘ಸಂವಿಧಾನ ನಿಬಂಧನೆಗಳ ಅನ್ವಯ, ಭಾರತದ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚಿಸಿ ರಾಷ್ಟ್ರಪತಿ ಅವರು ಇಬ್ಬರು ನ್ಯಾಯಮೂರ್ತಿಗಳಾದ ಕೋಟೀಶ್ವರ್ ಸಿಂಗ್‌ ಮತ್ತು ಮಹದೇವನ್ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ಈ ಮೂಲಕ ಸಿಂಗ್‌ ಅವರು, ‘ಮಣಿಪುರದಿಂದ ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ನೇಮಕವಾದ  ಮೊದಲ ನ್ಯಾಯಮೂರ್ತಿ’ಯಾ‌ಗಿದ್ದಾರೆ.

ಮಣಿಪುರ ಮೂಲದ ಸಿಂಗ್ ಅವರು ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ನ್ಯಾಯಮೂರ್ತಿ ಮಹದೇವನ್ ಅವರು ಮದ್ರಾಸ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನ್ಯಾಯಮೂರ್ತಿ ಅನಿರುದ್ಧ ಬೋಸ್ 2024ರ ಏಪ್ರಿಲ್ 10 ರಂದು ಮತ್ತು ನ್ಯಾಯಮೂರ್ತಿ ಎ.ಎಸ್ ಬೋಪಣ್ಣ ಅವರು 2024ರ ಮೇ 19ರಂದು ನಿವೃತ್ತರಾದ ಕಾರಣ ಖಾಲಿಯಾದ ಹುದ್ದೆಗಳಿಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ಇತರ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ನೇತೃತ್ವದ ಕೊಲಿಜಿಯಂ ಜುಲೈ 11 ರಂದು ಈ ಇಬ್ಬರ ಹೆಸರನ್ನು ಶಿಫಾರಸು ಮಾಡಿತ್ತು.

ಕೊಲಿಜಿಯಂ ನಾಲ್ವರು ಹಿರಿಯ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್ ಗವಾಯಿ, ಸೂರ್ಯಕಾಂತ್ ಮತ್ತು ಹೃಷಿಕೇಶ್ ರಾಯ್ ಅವರನ್ನು ಒಳಗೊಂಡಿತ್ತು.

ಸಿಂಗ್ ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕ ಮಾಡುವುದರಿಂದ ಈಶಾನ್ಯ ಭಾಗಕ್ಕೆ ಪ್ರಾತಿನಿಧ್ಯ ಸಿಗಲಿದೆ ಎಂದು ಕೊಲಿಜಿಯಂ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮುಖ್ಯವಾಗಿ ಅವರು ಮಣಿಪುರ ರಾಜ್ಯದಿಂದ ಸುಪ್ರೀಂ ಕೋರ್ಟ್‌ ನ ನ್ಯಾಯಮೂರ್ತಿಯಾಗಿ ನೇಮಕಗೊಂಡ ಮೊದಲ ನ್ಯಾಯಮೂರ್ತಿಯಾಗಿದ್ದಾರೆ ಎಂದು ಅದು ಹೇಳಿದೆ.

ನ್ಯಾಯಮೂರ್ತಿ ಮಹದೇವನ್, ಅವರು ತಮಿಳುನಾಡಿನ ಹಿಂದುಳಿದ ಸಮುದಾಯಕ್ಕೆ ಸೇರಿದವರು.  ಹಿಂದುಳಿದ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ಸಲುವಾಗಿ ಕೊಲಿಜಿಯಂ ನ್ಯಾಯಮೂರ್ತಿ ಮಹದೇವನ್ ಅವರ ಉಮೇದುವಾರಿಕೆಗೆ ಆದ್ಯತೆ ನೀಡಿದೆ ಎಂದು ಕೊಲಿಜಿಯಂ ಹೇಳಿದೆ.

ಭಾರತದ ಸುಪ್ರೀಂ ಕೋರ್ಟ್, ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಸೇರಿದಂತೆ 34 ನ್ಯಾಯಾಧೀಶರ ಬಲವನ್ನು ಹೊಂದಿದೆ.

RELATED ARTICLES
- Advertisment -
Google search engine

Most Popular