ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸೂಚನೆ ಮೇರೆಗೆ ಜನರ ಪ್ರಾಣ ಮತ್ತು ಆರೋಗ್ಯ ರಕ್ಷಣೆಗೆ ಎಲ್ಲಾ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ ತಿಳಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಕೆ. ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ನಿಧನರಾದ ಕನಕರಾಜು ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಮಾತನಾಡಿದ ಅವರು ಮೃತರ ಕುಟುಂಬಕ್ಕೆ ಸರ್ಕಾರದ ವತಿಯಿಂದ ೨ ಲಕ್ಷ ಪರಿಹಾರ ನೀಡಲಾಗುವುದು. ಜನರ ಆರೋಗ್ಯ ರಕ್ಷಣೆ ಹಾಗೂ ಶುದ್ಧ ನೀರನ್ನು ಕೊಡುವುದು ಸರ್ಕಾರದ ಕರ್ತವ್ಯವಾಗಿದ್ದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕುಮಾರಸ್ವಾಮಿ ನೇತೃತ್ವದಲ್ಲಿ ರೋಗ ತಡೆಗಟ್ಟುವ ಎಲ್ಲಾ ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಂಡಿದ್ದು ೪ ಆಂಬುಲೆನ್ಸ್, ೨೫ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ಊರಿನ ಶಾಲಾ ಆವರಣದಲ್ಲಿ ಬೀಡುಬಿಟ್ಟಿದ್ದಾರೆ.
ಒಟ್ಟು ೯೫ ಜನರಲ್ಲಿ ೭೩ ಜನ ವಯಸ್ಕರು, ೨೨ ಜನ ಮಕ್ಕಳಿದ್ದಾರೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಇವರಲ್ಲಿ ೩೭ ಜನರನ್ನು ಬೇರೆ ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಖ್ಯಮಂತ್ರಿಗಳು ಇದರ ಬಗ್ಗೆ ವರದಿ ಕೇಳಿದ್ದಾರೆ. ಅಧಿಕಾರಿಗಳಿಂದ ಕರ್ತವ್ಯ ಲೋಪವಾಗಿದ್ದರೆ ಅವರ ಮೇಲೆ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದರು. ಮುಡಾ ಅಧ್ಯಕ್ಷ ಕೆ. ಮರೀಗೌಡ ಮಾತನಾಡಿ ಮುಡಾ ವತಿಯಿಂದ ಕೆ. ಸಾಲುಂಡಿ ಗ್ರಾಮಕ್ಕೆ ಹೊಸದಾಗಿ ೩ ಬೋರ್‌ವೆಲ್‌ಗಳನ್ನು ಕೊರೆಸಿ ನೀರನ್ನು ಸರಬರಾಜು ಮಾಡಲಾಗುವುದು ಹಾಗೂ ೩ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿಲಾಗುವುದು, ಗ್ರಾಮದ ಉಳಿದ ರಸ್ತೆಗಳಿಗೆ ಕಾಂಕ್ರಿಟ್ ಹಾಕಲು ಕ್ರಮಕೈಗೊಳ್ಳಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಕೆ. ಹರೀಶ್‌ಗೌಡ, ಜಿ.ಪಂ. ಮಾಜಿ ಸದಸ್ಯ ರಾಕೇಶ್ ಪಾಪಣ್ಣ, ಬೀರಿಹುಂಡಿ ಬಸವಣ್ಣ, ಕೆಂಚಪ್ಪ, ಕೃಷ್ಣಕುಮಾರ್‌ಸಾಗರ್, ಮಾಜಿ ನಗರಪಾಲಿಕೆ ಸದಸ್ಯ ಗೋಪಿ, ಡಿಹೆಚ್‌ಓ ಕುಮಾರಸ್ವಾಮಿ ಹಾಜರಿದ್ದರು.