ಮುಂಬೈ: ಖ್ಯಾತ ಸಂಗೀತ ಸಂಯೋಜಕ ಹಾಗೂ ಗಾಯಕ ಎ.ಆರ್.ರೆಹಮಾನ್ ಅವರ ದಾಂಪತ್ಯ ಜೀವನ ಮುರಿದು ಬಿದ್ದಿದೆ. ರೆಹಮಾನ್ ಅವರು ತಮ್ಮ ಪತ್ನಿ ಸೈರಾ ಬಾನು ಅವರಿಗೆ ವಿಚ್ಛೇದನ ನೀಡಿರುವುದರಿಂದ ಅವರು 29 ವರ್ಷಗಳ ದಾಂಪತ್ಯ ಜೀವನ ಕೊನೆಗೊಂಡಿದೆ.
ರೆಹಮಾನ್ ಅವರು ಖ್ಯಾತ ಸಂಗೀತ ಸಂಯೋಜಕರು. ಮೊದಲು ಹಿಂದೂ ಆಗಿದ್ದ ಅವರು ನಂತರ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಹೀಗಾಗಿ ಅವರು ಮುಸ್ಲಿಂ ಹುಡುಗಿಯನ್ನೇ ಮದುವೆ ಆಗಿದ್ದರು. ಇಬ್ಬರೂ ಇನ್ನೇನು ಮೂರು ದಶಕಗಳ ದಾಂಪತ್ಯ ಸಂಭ್ರಮವನ್ನು ಆಚರಿಸಬೇಕಿತ್ತು. ಆದರೆ, ಅದಕ್ಕೂ ಮೊದಲೇ ಇಬ್ಬರೂ ಬೇರೆ ಆಗುವ ನಿರ್ಧಾರ ಮಾಡಿದ್ದಾರೆ. ಈ ವಿಚಾರವನ್ನು ಸೈರಾ ಬಾನು ಅವರು ಖಚಿತಪಡಿಸಿದ್ದರು. ಈಗ ರೆಹಮಾನ್ ಕೂಡ ವಿಚ್ಛೇದನದ ಬಗ್ಗೆ ಮೌನ ಮುರಿದಿದ್ದಾರೆ.
ನಾವು ಇನ್ನೇನು 30 ವರ್ಷಗಳ ದಾಂಪತ್ಯಕ್ಕೆ ಕಾಲಿಡಬೇಕಿತ್ತು. ಆದರೆ, ಯಾರೂ ಊಹಿಸದ ಅಂತ್ಯ ಸಿಕ್ಕಿದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಆದರೂ, ಈ ಚೂರಾದ ಸಂಬಂಧದಲ್ಲೂ ನಾವು ಅರ್ಥವನ್ನು ಹುಡುಕುತ್ತೇವೆ. ಒಡೆದ ತುಣುಕುಗಳು ಮತ್ತೆ ಎಂದಿಗೂ ಒಂದಾಗಲಾರದು. ನಮ್ಮ ಖಾಸಗಿತನ ಗೌರವಿಸಿದ ಗೆಳೆಯರಿಗೆ ಧನ್ಯವಾದಗಳು ಎಂದು ರೆಹಮಾನ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
1995ರಲ್ಲಿ ರೆಹಮಾನ್ ಹಾಗೂ ಸೈರಾ ವಿವಾಹ ಆಗಿದ್ದರು. ರೆಹಮಾನ್ ಅವರು ನಾಚಿಕೆ ಸ್ವಭಾವದವರು. ಹೀಗಾಗಿ, ಅವರಿಗೆ ಯಾರನ್ನೂ ಪ್ರೀತಿ ಮಾಡುವಷ್ಟು ಧೈರ್ಯ ಇರಲಿಲ್ಲ. ಹೀಗಾಗಿ ಅರೇಂಜ್ ವ್ಯಾರೇಜ್ ಆಗಬೇಕಾಯಿತು. ತಾಯಿ ನೋಡಿದ ಹುಡುಗಿಯನ್ನು ಅವರು ಮದುವೆ ಆದರು. ಆಗ ಅವರಿಗೆ 29 ವರ್ಷ ವಯಸ್ಸಾಗಿತ್ತು. ಈ ದಂಪತಿಗೆ ಮೂವರು ಮಕ್ಕಳು ಇದ್ದಾರೆ.