ಮೈಸೂರು/ಹಾಸನ: 8 ಬಾರಿ ಯಶಸ್ವಿಯಾಗಿ ಮೈಸೂರು ದಸರಾ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಇಂದು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೃತಪಟ್ಟಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಎಸಳೂರು ಬಳಿ ಆನೆ ಸೆರೆ ಕಾರ್ಯಾಚರಣೆ ವೇಳೆ ಒಂಟಿಸಲಗ ದಾಳಿಯಿಂದ ಸಾಕಾನೆ ಅರ್ಜುನ ಸಾವನ್ನಪ್ಪಿದ್ದಾನೆ. ಜಂಬೂಸವಾರಿಯಲ್ಲಿ ಅರ್ಜುನ ನಿಶಾನೆಯಾಗಿದ್ದ. 22 ವರ್ಷಗಳ ಕಾಲ ದಸರಾದಲ್ಲಿ ಅರ್ಜುನ ಭಾಗವಹಿಸಿದ್ದ 8 ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದ ಅರ್ಜುನ
64 ವರ್ಷದ ಅರ್ಜುನ ಆನೆ ಮೈಸೂರು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬಳ್ಳೆ ಶಿಬಿರದಲ್ಲಿ ಇತ್ತು. ದಸರೆಯಿಂದ ನಾಲ್ಕು ವರ್ಷದ ಹಿಂದೆ ನಿವೃತ್ತಿ ನೀಡಲಾಗಿತ್ತು. ಅಂಬಾರಿ ಹೊರದೇ ಇದ್ದರೂ ದಸರೆಯಲ್ಲಿ ಭಾಗಿಯಾಗುತ್ತಿತ್ತು. ನಂತರ ಆನೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಾಗುತ್ತಿತ್ತು.
ಅರ್ಜುನ ಹಾಗೂ ಕಾಡಾನೆ ನಡುವೆ ನಡೆದ ಕಾಳಗದ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆಯೇ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕಾಡಾನೆಗಳು ಇದ್ದ ಸ್ಥಳಕ್ಕೆ ಹೋದಾಗ 12 ಆನೆಗಳಿದ್ದವು. ಆನೆಗಳ ಗುಂಪನ್ನು ಗಂಡಾನೆಯೊಂದು ಲೀಡ್ ಮಾಡ್ತಿತ್ತು. ಕಾಡಾನೆ ಮತ್ತಿನಲ್ಲಿ ಇದ್ದರೂ ಅರ್ಜುನ ಕಾಳಗಕ್ಕೆ ಇಳಿದಿದ್ದ ಎಂದು ಅವರು ತಿಳಿಸಿದ್ದಾರೆ.
ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡಲಾಗಿದ್ದರೂ ಅದು ಪೂರ್ಣ ಪ್ರಜ್ಞೆ ತಪ್ಪಿರಲಿಲ್ಲ. ಮತ್ತಿನಲ್ಲಿದ್ದಾಗ ಸಾಕಾನೆಗಳ ಮೇಲೆ ದಾಳಿಗೆ ಮುಂದಾಗಿದೆ. ಇದೇ ವೇಳೆ ಇತರ ಆನೆಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಓಡಿಹೋಗಿದ್ದಾರೆ. ಆದರೆ, ಅರ್ಜುನ ಮಾತ್ರ ಅದರ ಜತೆ ಕಾಳಗ ನಡೆಸಿತು ಎಂದು ಅವರು ಮಾಹಿತಿ ನೀಡಿದ್ದಾರೆ.
ಇದೀಗ ಮೃತಪಟ್ಟಿರುವ ಅರ್ಜುನ ಆನೆ ಬಳಿ ಹೋಗಲು ಸಾಧ್ಯವಾಗುತ್ತಿಲ್ಲ. ಸುತ್ತಮುತ್ತ ಕಾಡಾನೆಗಳು ಇನ್ನೂ ಓಡಾಡುತ್ತಿವೆ. ಮೇಲಧಿಕಾರಿಗಳಿಗೆ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದೇವೆ. ಮೇಲಧಿಕಾರಿಗಳ ಸೂಚನೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೋಹನ್ ಕುಮಾರ್ ತಿಳಿಸಿದ್ದಾರೆ.