Friday, April 4, 2025
Google search engine

Homeರಾಜಕೀಯ30 ವರ್ಷ‌ ಹಳೆಯ ಪ್ರಕರಣಗಳಲ್ಲಿ ಹಿಂದೂ ಕಾರ್ಯಕರ್ತರ ಬಂಧನ, ಬಿಜೆಪಿಯಿಂದ ತೀವ್ರ ಹೋರಾಟ: ಪ್ರತಿಪಕ್ಷ ನಾಯಕ...

30 ವರ್ಷ‌ ಹಳೆಯ ಪ್ರಕರಣಗಳಲ್ಲಿ ಹಿಂದೂ ಕಾರ್ಯಕರ್ತರ ಬಂಧನ, ಬಿಜೆಪಿಯಿಂದ ತೀವ್ರ ಹೋರಾಟ: ಪ್ರತಿಪಕ್ಷ ನಾಯಕ ಆರ್.ಅಶೋಕ ಎಚ್ಚರಿಕೆ

ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸುತ್ತಿದ್ದು, ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ, ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರ ಕಚೇರಿ ಪೂಜೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕಾಂಗ್ರೆಸ್ ಮತ್ತೆ ದ್ವೇಷದ ರಾಜಕಾರಣ ಆರಂಭಿಸಿದೆ. ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕಗ್ಗೊಲೆಯಾಗಿತ್ತು. ಅಯೋಧ್ಯೆಯ ಶ್ರೀರಾಮಮಂದಿರ ಉದ್ಘಾಟನೆಯಾಗುತ್ತಿರುವ ಐತಿಹಾಸಿಕ ಕ್ಷಣಕ್ಕೆ ಜನರು ಕಾಯುತ್ತಿದ್ದು, ಕಾಂಗ್ರೆಸ್ ಮಾತ್ರ ಇದನ್ನು ಭಯವೆಂಬಂತೆ ಬಿಂಬಿಸುತ್ತಿದೆ. ಇದೇ ವೇಳೆ ಹುಬ್ಬಳ್ಳಿಯಿಂದ ರಾಮಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡ ಇಬ್ಬರನ್ನು 30 ವರ್ಷಗಳ ಹಿಂದಿನ ಪ್ರಕರಣ ಸಂಬಂಧ ಜೈಲಿಗೆ ಕಳುಹಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ರಾಮಮಂದಿರ ಉದ್ಘಾಟನೆಯ ಆಚರಣೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿರುವ ಸಂದರ್ಭದಲ್ಲಿ ಇಂತಹ ಕ್ರಮವನ್ನು ಸರ್ಕಾರ ಕೈಗೊಂಡಿದೆ. ನಾನು ಕೂಡ ಆಗ ಹೋರಾಟದಲ್ಲಿ ಭಾಗವಹಿಸಿದ್ದು, ನನ್ನನ್ನೂ ಬಂಧಿಸುತ್ತೀರಾ? ಅಷ್ಟು ಧೈರ್ಯ ಇದೆಯಾ? ಎಂದು ಪ್ರಶ್ನೆ ಮಾಡಿದರು.

ಕಾರ್ಯಕರ್ತರ ಮೇಲೆ ಹಾಕಿದ ಕೇಸು ವಾಪಸ್ ಪಡೆಯಬೇಕು. ಹಳೆಯ ಪ್ರಕರಣ ಹೊರತೆಗೆದು ಬಂಧಿಸಲು ಪೊಲೀಸ್ ಇಲಾಖೆಯಲ್ಲಿ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ. ಇಂತಹ ದ್ವೇಷ ರಾಜಕಾರಣದ ವಿರುದ್ಧ ಬಿಜೆಪಿಯಿಂದ ಪ್ರತಿಭಟಿಸಲಾಗುವುದು‌ ಎಂದು ಎಚ್ಚರಿಕೆ ನೀಡಿದರು‌.

ಟಿಪ್ಪು ಜಯಂತಿ ಮಾಡುತ್ತಾರೆ, ಶ್ರೀ ರಾಮನನ್ನು ಪೂಜಿಸಲ್ಲ

ಸಿಎಂ ಸಿದ್ದರಾಮಯ್ಯನವರು ರಾಜ್ಯಾದ್ಯಂತ ಟಿಪ್ಪು ಜಯಂತಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಅವರಿಗೆ ಕೇಸರಿ ಕಂಡರೆ ಆಗಲ್ಲ, ನಾಮ ಹಚ್ಚಿದರೆ ಸಮಸ್ಯೆ ಕಂಡುಬರುತ್ತದೆ. ಆದರೆ ಮಸೀದಿಯಲ್ಲಿ ಟೋಪಿ ಹಾಕಿಕೊಳ್ಳುತ್ತಾರೆ. ವೋಟಿಗಾಗಿ ಧರ್ಮ, ಜಾತಿ ಒಡೆಯುವುದು ಅವರ ಗುಣ. ಅವರ ರಕ್ತದ ಕಣದಲ್ಲೂ ಒಡೆಯುವ ಗುಣ ಇದೆ. ಬ್ರಿಟಿಷರ ಒಡೆಯುವ ಗುಣ ಕಾಂಗ್ರೆಸ್ ನ ಎಲ್ಲರಲ್ಲೂ ಇದೆ. ಈ ಹಿಂದೆ ವೀರಶೈವ ಲಿಂಗಾಯತರನ್ನು ಒಡೆಯುವ ಕೆಲಸ ಮಾಡಿದ್ದರು‌ ಎಂದು ನೆನಪಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ನಡೆಯುತ್ತಿಲ್ಲ ಎಂದು ಕಾಂಗ್ರೆಸ್ ನ ಶಾಸಕರೇ ಹೇಳಿದ್ದಾರೆ. ಶಾಸಕರು ಕ್ಷೇತ್ರಕ್ಕೆ ಹೋದರೆ ಜನರು ಬಯ್ಯುತ್ತಿದ್ದಾರೆ. ಹೀಗಾಗಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯ, ಒಡಕು ಬಂದಿದೆ. ಮುಖ್ಯಮಂತ್ರಿಯವರ ಬದಲಾವಣೆಯೂ ಆಗಬಹುದು. ಡಿ.ಕೆ.ಶಿವಕುಮಾರ್ ಅವರೇ ಸಿಎಂ ಬದಲಾವಣೆಯ ಸುಳುಹು ನೀಡಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ದೊಡ್ಡ ಬದಲಾವಣೆಗಳನ್ನು ಜನರು ನಿರೀಕ್ಷೆ ಮಾಡಬಹುದು‌. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದರಿಂದ ಅನುಭವದ ಆಧಾರದಲ್ಲಿ ಈ ಬಗ್ಗೆ ಹೇಳಿದ್ದಾರೆ ಎಂದರು‌.

ಮುಖ್ಯಮಂತ್ರಿಯವರು ಆರ್ಥಿಕ ಸಲಹೆಗಾರರನ್ನು ನೇಮಿಸಿಕೊಂಡಿದ್ದಾರೆ. ಯಾರು ಸರ್ಕಾರದ ವಿರುದ್ಧ ಮಾತಾಡುತ್ತಾರೋ ಅವರಿಗೆ ಬೇಗ ಉನ್ನತ ಹುದ್ದೆ ಸಿಗುವುದು ಸಹಜ. ರಮೇಶ್ ಕುಮಾರ್ ಅವರಿಗೂ ಹಿಂದೆ ಹೀಗೆಯೇ ಹುದ್ದೆ ಸಿಕ್ಕಿತ್ತು. ಇದು ಕಾಂಗ್ರೆಸ್ ನಲ್ಲಿರುವ ಚಾಳಿ‌‌ ಎಂದು ವ್ಯಂಗ್ಯವಾಡಿದರು.

ಹೊಸ ವರ್ಷದಲ್ಲಿ ಕರ್ನಾಟಕ ಅಭಿವೃದ್ಧಿ ಪಥದಲ್ಲಿ ಸಾಗಲಿ. ಕಳೆದ ಏಳು ತಿಂಗಳಿಂದ ಸ್ಥಗಿತಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ಮರು ಚಾಲನೆ ದೊರೆಯಲಿ ಎಂದು ಆಶಿಸಿದರು.

RELATED ARTICLES
- Advertisment -
Google search engine

Most Popular