ನವದೆಹಲಿ: ಮಹತ್ವದ ಜಿ೨೦ ಶೃಂಗಸಭೆಗೆ ರಾಷ್ಟ್ರ ರಾಜಧಾನಿ ದೆಹಲಿ ಸಜ್ಜಾಗಿದೆ. ನಾಳೆಯಿಂದ ಎರಡು ದಿನಗಳ ಕಾಲ ನಡೆಯುವ ಶೃಂಗಕ್ಕೆ ಜಾಗತಿಕ ಮಟ್ಟದ ನಾಯಕರು ಆಗಮಿಸಲು ಆರಂಭಿಸಿದ್ದಾರೆ. ಇಂದು ಬೆಳಗ್ಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಅರ್ಜೆಂಟಿನಾದ ಅಧ್ಯಕ್ಷ ಆಲ್ಬರ್ಟೊ ಫೆರ್ನಾಂಡಿಸ್ ಮತ್ತು ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ಸೇರಿ ಉನ್ನತ ಜಿ20 ಗುಂಪಿನ ನಾಯಕರು ಭಾರತಕ್ಕೆ ಬಂದಿಳಿದಿದ್ದಾರೆ.
ಪ್ರಸ್ತುತ ಜಿ20 ಅಧ್ಯಕ್ಷತೆ ವಹಿಸಿರುವ ಭಾರತವು ಈ ಶೃಂಗಸಭೆಯನ್ನು ಆಯೋಜಿಸಿದೆ. ಸೆಪ್ಟೆಂಬರ್ ೯ ಮತ್ತು ೧೦ರಂದು ನಡೆಯುವ ವಾರ್ಷಿಕ ಶೃಂಗಸಭೆಯಲ್ಲಿ ಜಿ೨೦ ರಾಷ್ಟ್ರಗಳ ನಾಯಕರು ಜಾಗತಿಕ ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಇಂದು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿವಿಧ ರಾಷ್ಟ್ರಗಳ ನಾಯಕರನ್ನು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸ್ವಾಗತಿಸಲಾಗುತ್ತಿದೆ.
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬರಮಾಡಿಕೊಂಡರು. ಈ ವೇಳೆ, ಕಲಾ ತಂಡಗಳೊಂದಿಗೆ ಇಟಲಿ ಪ್ರಧಾನಿ ಫೋಟೋ ತೆಗೆಸಿಕೊಂಡರು. ಯೂನಿಯನ್ ಆಫ್ ಕೊಮೊರೊಸ್ ಅಧ್ಯಕ್ಷ ಮತ್ತು ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಲಿ ಅಸ್ಸೌಮಾನಿ ಹಾಗೂ ಮಾರಿಷಸ್ ಪ್ರಧಾನಿ ಪ್ರವೀಂದ್? ಕುಮಾರ್ ಜುಗ್ನಾಥ್ ಕೂಡ ದೆಹಲಿಗೆ ಆಗಮಿಸಿದರು. ಮತ್ತೊಂದೆಡೆ, ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ್ ಅವರು ಮಾರಿಷಸ್ ಪ್ರಧಾನಿ ಜುಗ್ನಾಥ್ ಅವರನ್ನು ಭೇಟಿ ಮಾಡಿ ಸಮಾಲೋಚಿಸಿದರು.