ಮೈಸೂರು ಗಾನ ವೈದ್ಯಲೋಕ ಸಂಸ್ಥೆ ಹಮ್ಮಿಕೊಂಡಿದ್ದ ಎಂದೂ ಮರೆಯದ ಹಾಡು ಕಾರ್ಯಕ್ರಮದಲ್ಲಿ ಅಭಿಮತ
ಮೈಸೂರು: ಸಾಹಿತ್ಯ, ಕಲೆ, ರಂಗಭೂಮಿ ಕ್ಷೇತ್ರಗಳ ಅಭಿರುಚಿ ಇರುವ ವೈದ್ಯರಿಂದ ಹೆಚ್ಚಿನ ವೃತ್ತಿ ಕೌಶಲ್ಯ ಸಮಾಜಕ್ಕೆ ನೆರವಾಗಲಿದೆ ಎಂದು ಸಾಹಿತಿ ಹಾಗೂ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ಡಾ. ಟಿ.ಸಿ.ಪೂರ್ಣಿಮಾ ಅಭಿಪ್ರಾಯಪಟ್ಟರು.
ನಗರದ ಮೈಸೂರು ಗಾನ ವೈದ್ಯಲೋಕ ಸಂಸ್ಥೆ ವತುಯಿಂದ ಹಮ್ಮಿಕೊಂಡಿದ್ದ ಎಂದೂ ಮರೆಯದ ಹಾಡು- ೧೦ ಮಾಲಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವೀಯತೆ, ಕರುಣೆ, ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಾಗಲಿದೆ. ಮೈಸೂರಿನ ವೈದ್ಯರು ಸಂಗೀತ ಹಾಗೂ ಗಾಯನದತ್ತ ಮುಖಮಾಡಿರುವುದು ಸಂತಸವನ್ನುಂಟು ಮಾಡಿದೆ ಎಂದು ಹೇಳಿದರು.
ಕೆಲಸದ ಒತ್ತಡದ ನಡುವೆ ವೈದ್ಯರು ಬಿಡುವಿನ ವೇಳೆಯಲ್ಲಿ ಬರವಣಿಗೆ, ಕಲೆ, ಸಂಗೀತ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡರೆ ತಮ್ಮ ವೃತ್ತಿ ಕೌಶಲ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬಹುದಾಗಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಥೆಗಾರ ಹನೂರು ಚನ್ನಪ್ಪ ಮಾತನಾಡಿ, ವೈದ್ಯರ ಸಂಗೀತದ ಅಭಿರುಚಿ ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ನೆರವಾಗುವುದರ ಜತೆಗೆ ವೈದ್ಯರ ಆರೋಗ್ಯ ಸುಧಾರಣೆಗೂ ಸಹಕಾರಿಯಾಗಲಿದೆ, ಹಾಗಾಗಿ ಮೈಸೂರಿನ ಗಾನ ವೈದ್ಯ ಲೋಕದ ವೈದ್ಯರು ಇತರೆ ವೈದ್ಯರಿಗೆ ಮಾದರಿ ಆಗಿದ್ದಾರೆ.ಇದು ಶ್ಲಾಘನೀಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗಾನ ವೈದ್ಯಲೋಕದ ಗೌರವಾಧ್ಯಕ್ಷ ಡಾ. ವೈ. ಡಿ . ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಡಾ. ಟಿ. ರವಿಕುಮಾರ್ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಎಂದೂ ಮರೆಯದ ಹಾಡು ಗಾಯನ ಸರಣಿಯ ಗಾಯಕರಾದ ಡಾ ವೈ.ಡಿ. ರಾಜಣ್ಣ.ಡಾ. ಟಿ. ರವಿಕುಮಾರ್. ಡಾ. ಪೂರ್ಣಿಮಾ, ಡಾ. ಸುರೇಂದ್ರನ್, ಡಾ. ಮನು, ಡಾ. ಶ್ಯಾಂ ಪ್ರಸಾದ್, ಡಾ. ಚಿನ್ನನಾಗಪ್ಪ, ಶ್ರೀಲತಾ , ಮನೋಹರ್, ಸಿ.ಎಸ್. ವಾಣಿ ಭಾವಪೂರ್ಣ ಕನ್ನಡ ಗೀತೆಗಳ ಗಾಯನದ ಮೂಲಕ ನೆರೆದಿದ್ದ ಸಭಿಕರನ್ನುರಂಜಿಸಿದರು. ನಿರೂಪಕ ಹಾಗೂ ಕನ್ನಡ ಉಪನ್ಯಾಸಕ ಎಡೆಯೂರು ಸಮೀಉಲ್ಲಾ ಹಾಡುಗಳ ಹಿಂದಿನ ಸ್ವಾರಸ್ಯಕರ ಸಂಗತಿಗಳನ್ನು ಪ್ರಸ್ತುತ ಪಡಿಸುವ ಮೂಲಕ ಗಮನಸೆಳೆದರು.