ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ದೇವಾಲಯಗಳನ್ನು ನಿರ್ಮಾಣ ಮಾಡುವುದು ಎಷ್ಟು ಮುಖ್ಯವೋ ದೇವಾಲಯದಲ್ಲಿ ಪ್ರತಿ ನಿತ್ಯ ದೇವರಿಗೆ ಪೂಜಾ ಕೈಂಕರ್ಯ ಮಾಡಿಕೊಂಡು ಹೋಗುವುದು ಅದಕ್ಕಿಂತ ಮುಖ್ಯವೆಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ ಅವರು ಹೇಳಿದರು.
ಅವರು ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ಶ್ರೀ ಪಟ್ಲದಮ್ಮ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಗ್ರಾಮದ ಸರ್ವರೂ ಒಟ್ಟಾಗಿ ಸೇರಿಕೊಂಡು ದೇವತಾ ಕಾರ್ಯ ಮಾಡುವ ಮೂಲಕ ಇತರೆಡೆಗೆ ಮಾದರಿಯಾಗಿದೆ.
ಎಲ್ಲರೂ ಪ್ರೀತಿ, ವಿಶ್ವಾಸ, ಶಾಂತಿ, ಸಹಬಾಳ್ವೆಯಿಂದ ತಮ್ಮ ಬದುಕನ್ನು ನಡೆಸಬೇಕು. ನಮ್ಮ ಸುತ್ತ ಮುತ್ತಲಿರುವ ಜನರು ಕಷ್ಟಕ್ಕೆ ಸಿಲುಕಿದಾಗ ಅವರ ನೆರವಿಗೆ ಬರಬೇಕು. ಆ ಹಾದಿಯಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಂತಹ ಗುಣಗಳನ್ನು ಅಳವಡಿಸಿಕೊಂಡು ಗುರು ಹಿರಿಯರ ಮಾರ್ಗದರ್ಶನದಲ್ಲಿ ಸಾಗಬೇಕು ಎಂದರು.
ದೇವಾಲಯವನ್ನು ತಳಿರು ತೋರಣ, ಹೂವು ಮತ್ತು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿ ದೇವಸ್ಥಾನದಲ್ಲಿ ಹೋಮ ಹವನಗಳು, ವಿವಿಧ ಅಭಿಷೇಕಗಳು ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳಂತೆ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.
ದೇವಾಲಯಕ್ಕೆ ಮಹಿಳೆಯರು, ಮಕ್ಕಳು, ಭಕ್ತರು ಹಾಗೂ ಸಾರ್ವಜನಿಕರುಗಳು ತಂಡೋಪ ತಂಡವಾಗಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಅನ್ನ ಸಂತರ್ಪಣ ಕಾರ್ಯವನ್ನು ಮಾಡಲಾಯಿತು.
ದೇವತಾ ಕಾರ್ಯಕ್ರಮದಲ್ಲಿ ಶಾಸಕ ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಮೈಮುಲ್ ಅಧ್ಯಕ್ಷ ಪ್ರಸನ್ನ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯ್, ಮಹಿಳಾ ಉದ್ಯಮಿ ಸವಿತಾ ವಿಜಯ್, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್, ಗ್ರಾ.ಪಂ. ಅಧ್ಯಕ್ಷ ಧನಂಜಯ, ಉಪಾಧ್ಯಕ್ಷ ರುಕ್ಮಿಣಿ, ಸದಸ್ಯರಾದ ಎ.ಜಿ.ತಮ್ಮೆಗೌಡ, ಕೆ.ಬಾಬು, ಮಂಜುಳಾ, ಲಕ್ಷ್ಮಮ್ಮ, ಹಾಲಿನ ಡೇರಿ ಅಧ್ಯಕ್ಷ ಅರುಣ್ ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮಣ್ಣ, ತಾ.ಪಂ. ಮಾಜಿ ಉಪಾಧ್ಯಕ್ಷ ನಟರಾಜ್, ಕೆ ಎಸ್ ಎಫ್ ಸಿ ಅಧಿಕಾರಿ ಎ.ಟಿ.ನಟರಾಜ್, ವಾಣಿಜ್ಯ ತೆರಿಗೆ ಅಧಿಕಾರಿ ಪುರಂದರ, ಮುಖಂಡರುಗಳಾದ ಕಾಯಿ ಮಧು, ಸುಧೀರ್, ಮನು, ಅನಿಲ್ ಕುಮಾರ್, ಬಾಲು, ಮಧು, ರಂಗಪ್ಪ, ಉದಯ್ ಶಂಕರ್, ಸಂದೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.