ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಪಟ್ಟಣದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಲಾಗಿದ್ದು, ನಗರಾಭಿವೃದ್ಧಿ ಇಲಾಖೆಯ ಅನುಮೋದನೆ ದೊರೆತ ಕೂಡಲೇ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ನೂತನ ಆಡಳಿತ ಮಂಡಳಿಯ ವತಿಯಿಂದ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿರ್ಮಾಣ ಮಾಡಿರುವ ನಮ್ಮ ಪಟ್ಟಣವನ್ನು ಯೋಜಿತ ನಗರವನ್ನಾಗಿ ಬೆಳೆಸಲು ಸರ್ವರು ಸಹಕಾರ ನೀಡಬೇಕೆಂದರು.
ಕೆ. ಆರ್. ನಗರ ಪುರಸಭೆಯನ್ನು ಮೇಲ್ದರ್ಜೆಗೇರಿಸಿ ನಗರಸಭೆಯನ್ನಾಗಿಸಲು ಎಲ್ಲಾ ಅವಕಾಶಗಳಿದ್ದು ಈ ವಿಚಾರವಾಗಿ ನಾನು ಮುಖ್ಯಮಂತ್ರಿಗಳು ಮತ್ತು ನಗರಾಭಿವೃದ್ದಿ ಸಚಿವರೊಂದಿಗೆ ಚರ್ಚಿಸಿ ಆ ಕೆಲಸವನ್ನು ಕಾರ್ಯಗತ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಪಟ್ಟಣ ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ನಿವೇಶನ ಖರೀದಿ ಮಾಡಿದವರಿಗೆ ಈ ಸ್ವತ್ತಿನ ಖಾತೆ ಮಾಡದಿರುವುದರಿಂದ ತುಂಬಾ ತೊಂದರೆಯಾಗಿದ್ದು ಈ ಬಗ್ಗೆ ಗಮನ ಹರಿಸಬೇಕೆಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್ ಮನವಿ ಮಾಡಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಸಮಸ್ಯೆಯನ್ನು ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಗಮನ ಹರಿಸುತ್ತೇನೆ ಎಂದರು.
ಪುರಸಭಾ ಕಚೇರಿಯಲ್ಲಿ ಮುಂದಿನ ವಾರ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಭೆ ನಡೆಸಿ ಸಾರ್ವಜನಿಕರ ಕೆಲಸಗಳು ಚುರುಕಾಗುವಂತೆ ಸೂಚನೆ ನೀಡುವುದರ ಜೊತೆಗೆ ಆಗಾಗ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ನುಡಿದರು.
ಪಟ್ಟಣದಲ್ಲಿ ಪ್ರಮುಖವಾಗಿ ಕುಡಿಯುವ ನೀರು, ಸ್ವಚ್ಛತೆ ಮತ್ತು ಬೀದಿ ದೀಪ ಸೇರಿದಂತೆ ನಾಗರಿಕರಿಗೆ ಇತರ ಮೂಲಭೂತ ಸವತ್ತುಗಳನ್ನು ಒದಗಿಸಲು ಆದ್ಯತೆ ನೀಡುವಂತೆ ಪುರಸಭೆ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದು ಈ ವಿಚಾರದಲ್ಲಿ ನಾನು ಅವರಿಗೆ ಸದಾ ಸಹಕಾರ ನೀಡುತ್ತೇನೆಂದು ಭರವಸೆ ನೀಡಿದರು.
ಪಟ್ಟಣದ 23 ವಾರ್ಡುಗಳಿಗೆ ಕಾವೇರಿ ನದಿಯಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಆಧುನೀಕರಣ ಕಾಮಗಾರಿಯ ಯೋಜನೆಗೆ ಅಮೃತ ಯೋಜನೆಯಡಿ 30 ಕೋಟಿ ಮಂಜೂರಾಗಿದ್ದು ಶೀಘ್ರದಲ್ಲಿಯೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಮಾಹಿತಿ ನೀಡಿದ ಡಿ. ರವಿಶಂಕರ್ ಇದರ ಜೊತೆಗೆ ವಿವಿಧ ಉದ್ಯಾನವನಗಳ ಅಭಿವೃದ್ದಿಗೆ 3 ಕೋಟಿ ಹಣ ನೀಡಲಾಗಿದ್ದು ಆ ಕೆಲಸವನ್ನು ಟೆಂಡರ್ ಕರೆದು ತ್ವರಿತವಾಗಿ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಪ್ರಕಟಿಸಿದರು.
ನಗರ ಯೋಜನಾ ಅಧಿಕಾರದ ಅಧ್ಯಕ್ಷ ಕೆ. ಎಸ್. ಮಹೇಶ್ ಮಾತನಾಡಿ ಪಟ್ಟಣದ ವ್ಯಾಪ್ತಿಯ ಎಲ್ಲಾ 23 ವಾರ್ಡುಗಳಲ್ಲಿ ಹೊಸದಾಗಿ ಬಡಾವಣೆ ನಿರ್ಮಾಣ ಮಾಡುವವರು ಸರ್ಕಾರದ ಆದೇಶವನ್ನು ಪಾಲಿಸಬೇಕು ಇಲ್ಲವಾದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪ್ರಾಧಿಕಾರದಿಂದ ಅನುಮತಿ ಪಡೆಯದೆ ಅಕ್ರಮವಾಗಿ ಬಡಾವಣೆ ನಿರ್ಮಾಣ ಮಾಡುವವರಿಗೆ ದಂಡ ವಿಧಿಸುವುದರ ಜತೆಗೆ ಅಂತಹವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಪಕ್ಷ ನನ್ನ ನಿಷ್ಠೆಯನ್ನು ಗುರುತಿಸಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷನನ್ನಾಗಿ ನೇಮಕ ಮಾಡಿದ್ದು ಮುಂದೆ ಈ ಸದಾವಕಾಶವನ್ನು ಬಳಸಿಕೊಂಡು ಕ್ಷೇತ್ರದ ಶಾಸಕರಾದ ಡಿ. ರವಿಶಂಕರ್ ಮತ್ತು ಪಕ್ಷಕ್ಕೆ ಹೆಸರು ಬರುವಂತೆ ಜನ ಸೇವೆ ಮಾಡುತ್ತೇನೆಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ನಿರ್ದೇಶಕರು ಶಾಸಕ ಡಿ. ರವಿಶಂಕರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ನಗರ ಯೋಜನಾ ಪ್ರಾಧಿಕಾರದ. ಮಾಜಿ ಅಧ್ಯಕ್ಷ ವೈ.ಎಸ್.ಕುಮಾರ್, ನಿರ್ದೇಶಕರಾದ ಸರಿತಾ ಜವರಪ್ಪ, ಕೆ.ಎನ್. ಪ್ರಸನ್ನ ಕುಮಾರ್, ಸೈಯದ್ ಜಾಬೀರ್, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಯನನಾಯಕ್, ಪುರಸಭೆ ಸದಸ್ಯ ನಟರಾಜು, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಣ, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜು ಕೆಂಚಿ, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ. ರವಿಕುಮಾರ್, ಕಾಂಗ್ರೆಸ್ ಹಿರಿಯ ಮುಖಂಡರಾದ ಹೆಚ್.ಎಸ್.ವೇಣುಗೋಪಾಲ್, ಪಟೇಲ್ ರಾಜು, ಯುವ ಕಾಂಗ್ರೆಸ್ ಮುಖಂಡ ಹೊಯ್ಸಳ, ಪುರಸಭೆ ಮುಖ್ಯ ಅಧಿಕಾರಿ ಡಾ.ಜಯಣ್ಣ ಮತ್ತಿತರರು ಇದ್ದರು.