ಕೃಷ್ಣರಾಜನಗರ: ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕರು ಕಾನೂನ ಬಗ್ಗೆ ತಿಳಿದುಕೊಂಡರೆ ಗ್ರಾಮಾಂತರ ಪ್ರದೇಶದಲ್ಲಿ ಸಾರ್ವಜನಿಕರ ಒಡನಾಡಿಯಾಗಿರುವ ನೀವು ಅವರಿಗೆ ಮಾರ್ಗದರ್ಶನ ನೀಡಬಹುದೆಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರವಿಂದ್ರ ಬಿ ಸಿ ತಿಳಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ತಾಲೂಕು ಆಡಳಿತ ಪುರಸಭೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಇತ್ತೀಚೆಗೆ ಹತ್ತು ಹಲವು ಕಾನೂನುಗಳನ್ನು ಜಾರಿಗೆ ತಂದು ಅವಿದ್ಯಾವಂತ ಕಡು ಬಡವರ ಹಿತ ಕಾಯುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಅದನ್ನು ನ್ಯಾಯಾಲಯ ಸೇರಿದಂತೆ ಎಲ್ಲಾ ಇಲಾಖೆಯ ಮುಖಾಂತರ ಜಾರಿಗೆ ತರಲು ಪ್ರಯತ್ನಿಸುತ್ತಿದೆ ಎಂದರು.
ರಾಜ್ಯಾದ್ಯಂತ ನವಂಬರ್ 9 ರಂದು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಎಲ್ಲಾ ತಾಲೂಕು ಮಟ್ಟದಲ್ಲಿ ಎಲ್ಲ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಮಾಡುವ ಮೂಲಕ ಕಾನೂನಿನ ಬಗ್ಗೆ ಅರಿವು ಮೂಡಿಸುವುದು ನೊಂದವರಿಗೆ ನೆರವು ನೀಡುವುದು ಅಸಹಾಯಕರಿಗೆ ಸಹಾಯ ಚಾಚುವುದು ಸೇರಿದಂತೆ ಇನ್ನಿತರ ಮಾಹಿತಿಯನ್ನು ನೀಡುವ ಮೂಲಕ ಸರ್ಕಾರದ ಆಶಯವನ್ನು ಈಡೇರಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪವಿತ್ರ ಆರ್ ಮಾತನಾಡಿ, ಇತ್ತೀಚಿಗೆ ನ್ಯಾಯಾಲಯದಲ್ಲಿಯೂ ಲೋಕ ಅದಾಲತ್ ನಡೆಸುವ ಮೂಲಕ ಹಿಂದೆ ಹಳ್ಳಿಗಳಲ್ಲಿ ಪಂಚಾಯಿತಿ ಕಟ್ಟೆಯ ಮೂಲಕ ನ್ಯಾಯ ತೀರ್ಮಾನ ಮಾಡುತ್ತಿದ್ದಂತೆ ಇಲ್ಲಿಯೂ ಸಹ ಉಭಯ ಪಾರ್ಟಿಗಳ ಸಮಕ್ಷಮ ವಕೀಲರ ಮೂಲಕ ತಿಳಿಹೇಳಿ ಕೇಸುಗಳನ್ನು ಇತ್ಯರ್ಥ ಮಾಡುವ ಜೊತೆಗೆ ನ್ಯಾಯಾಲಯಕ್ಕೆ ಕಟ್ಟಿದ ಹಣವನ್ನು ನೂರಕ್ಕೆ ನೂರರಷ್ಟು ಹಿಂದಿರುಗಿಸುವ ಮೂಲಕ ನ್ಯಾಯ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಬಾಲ್ಯ ವಿವಾಹ ಮಹಿಳೆಯರ ಮೇಲೆ ದೌರ್ಜನ್ಯ, ಕಟ್ಟಡ ಕಾರ್ಮಿಕರಿಗೆ ಹಿಂಸೆ 60 ವರ್ಷ ಮೇಲ್ಪಟ್ಟ ವಯೋ ವೃದ್ಧರಿಗೆ ಹಿಂಸೆ ನೀಡಿದರೆ ತಕ್ಷಣ ನ್ಯಾಯಾಲಯ ತಾಲೂಕ ಕಚೇರಿ ತಾಲೂಕ ಪಂಚಾಯತಿ ಪೋಲಿಸ್ ಠಾಣೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಬಹುದು. ಹಾಗೂ ಮಹಿಳೆಯರು ಕರ್ತವ್ಯ ನಿರ್ವಹಿಸುವ ಸಂಘ ಸಂಸ್ಥೆಗಳಲ್ಲಿಯೂ ಸಮಿತಿಯೊಂದನ್ನು ರಚಿಸಿಕೊಂಡು ಆ ಸಮಿತಿಯ ಮೂಲಕ ದೌರ್ಜನ್ಯ ಮತ್ತು ಇನ್ನಿತರ ಹಿಂಸೆಗಳ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಾಯಿಸಬಹುದೆಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಹೆಚ್ಚುವರಿ ನ್ಯಾಯಾಧೀಶರಾದ ಚಂದನ್ ಎಸ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಜಿ ಕೆ ಹರೀಶ್, ಪುರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ ಮಾತನಾಡಿದರು.
ವೇದಿಕೆಯಲ್ಲಿ ತಹಸಿಲ್ದಾರ್ ಪೂರ್ಣಿಮಾ, ಸಿಡಿಪಿ ಓ ಅಧಿಕಾರಿ ಅಣ್ಣಯ್ಯ, ಪುರಸಭಾ ಇಂಜಿನಿಯರ್ ರಿತು ಸಿಂಗ್, ಆರೋಗ್ಯ ಸಹಾಯಕ ಲೋಕೇಶ್, ಕಂದಾಯ ಅಧಿಕಾರಿ ರಮೇಶ್, ಪಿ ಎಸ ಐ ಧನರಾಜ್, ಆರೋಗ್ಯ ಇಲಾಖೆಯ ರೇಖಾ, ಪುರಸಭಾ ಸದಸ್ಯ ಕೋಳಿ ಪ್ರಕಾಶ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.