ಹುಬ್ಬಳ್ಳಿ: ನಗರದ ಹಳೆ ಕೋರ್ಟ್ ಬಳಿ ತೆರಳುತ್ತಿದ್ದಾಗ ಫ್ಲೈಓವರ್ ಕಾಮಗಾರಿಯ ರಾಡ್ ತಲೆ ಮೇಲೆ ಬಿದ್ದು ಗಾಯಗೊಂಡಿದ್ದ ಹುಬ್ಬಳ್ಳಿ ಉಪನಗರ ಠಾಣೆಯ ಎಎಸ್ಐ ನಾಭಿರಾಜ್ ದಯಣ್ಣವರ (59) ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ. ಘಟನೆ ಬಳಿಕ ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸರು, ಇದೀಗ ಮಹಾರಾಷ್ಟ್ರ ಮೂಲದ ಝಂಡು ಕನ್ಸ್ಟ್ರಕ್ಷನ್ ಕಂಪನಿಯ 11 ಜನ ನೌಕರರನ್ನು ಬಂಧಿಸಿದ್ದಾರೆ.
ಝಂಡು ಕನ್ಸ್ಟ್ರಕ್ಷನ್ ಸೂಪರ್ ವೈಸರ್ ಹರ್ಷ ಹೊಸಗಾಣಿಗೇರ, ಲೈಸನಿಂಗ್ ಇಂಜಿನಿಯರ್ ಜಿತೇಂದ್ರ ಪಾಲ್, ಇಂಜನಿಯರ್ ಭೂಪೇಂದರ್, ನೌಕರರಾದ ಮಹಮ್ಮದ್ ಮಿಯಾ, ಅಸ್ಲಂ, ಮೊಹಮ್ಮದ್ ಹಾಜಿ, ಸಬೀಬ್, ರಿಜಾವುಲ್, ಶಮೀಮ್ ಅಲಿಯಾಸ್ ಪಿಂಟು ಶೇಕ್, ಮೊಹಮ್ಮದ್ ಆರೀಫ್ ಹಾಗೂ ಕಾರ್ಮಿಕ ಗುತ್ತಿಗೆದಾರ ಮೊಹಮ್ಮದ್ ರಬಿವುಲ್ ಹಕ್ ಬಂಧಿತರು.
ಹುಬ್ಬಳ್ಳಿಯ ಕಿಮ್ಸ್ನಲ್ಲಿ ಕಳೆದ ಆರು ದಿನಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಾಭಿರಾಜ್ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಘಟನೆ ನಡೆದ ದಿನವೇ 19 ಜನರ ಮೇಲೆ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯಾರೇ ಇರಲಿ ಕಾನೂನು ಕ್ರಮ ಕೈಗೊಳುತ್ತೇವೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಹೇಳಿದ್ದರು.
ಇದೇ ಸ್ಥಳದಲ್ಲಿ ಹಿಂದೆ ಎರಡು ಬಾರಿ ಅವಘಡ ಸಂಭವಿಸಿದಾಗಲೂ ಗುತ್ತಿಗೆದಾದರರು ಎಚ್ಚೆತ್ತುಕೊಂಡಿಲ್ಲ. ಅದರ ಪರಿಣಾಮ ಹತ್ತು ತಿಂಗಳಲ್ಲಿ ನಿವೃತ್ತಿಯಾಗಬೇಕಿದ್ದ ನಾಭಿರಾಜ್ ಪ್ರಾಣ ಕಳೆದುಕೊಂಡಿದ್ದಾರೆ. ಇತ್ತ ದೂರು ದಾಖಲಾಗುತ್ತಲೇ ಝಂಡು ಕನ್ಸ್ಟ್ರಕ್ಷನ್ನ ಹುಬ್ಬಳ್ಳಿಯ ಎರಡು ಕಚೇರಿಗಳನ್ನು ಬಂದ್ ಮಾಡಿಕೊಂಡು ಹೋಗಿದ್ದಾರೆ.