ಹಾಂಗ್‌ಝೌ (ಚೀನಾ): ಏಷ್ಯನ್ ಕ್ರೀಡಾಕೂಟದ ಗಾಲ್ಫ್‌ನಲ್ಲಿ ಕರ್ನಾಟಕ ಅದಿತಿ ಅಶೋಕ್ ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ತಂದಿದ್ದಾರೆ. ಭಾನುವಾರ ಬೆಳಗ್ಗೆ ನಡೆದ ಗಾಲ್ಫ್ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಅದಿತಿ ಅಶೋಕ್ ಬೆಳ್ಳಿ ಪದಕ ಕೊರಳಿಗೇರಿಸಿಕೊಂಡರು.
ಏಷ್ಯನ್ ಗೇಮ್ಸ್ ಗಾಲ್ಫ್ ಕ್ರೀಡೆಯಲ್ಲಿ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕ್ರೀಡಾಕೂಟ ಎಂಬ ದಾಖಲೆ ಬರೆದಿದ್ದಾರೆ. ಫೈನಲ್‌ನಲ್ಲಿ ಆರಂಭದಿಂದ ಮುನ್ನಡೆಯಲ್ಲಿದ್ದ ಅದಿತಿ ಅಶೋಕ್‌ಗೆ ಚಿನ್ನ ಗೆಲ್ಲುವ ಅವಕಾಶವಿತ್ತು. ಆದ್ರೆ ಕೊನೆ ಎರಡ್ಮೂರು ಹೊಡೆತಗಳಲ್ಲಿ ಹಿನ್ನಡೆ ಅನುಭವಿಸಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಥಾಯ್ಲೆಂಡ್‌ನ ಅರ್ಪಿಚಯಾ ಯುಬೋಲ್ ಚಿನ್ನದ ಪದಕ ಜಯಿಸಿದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಅದಿತಿ ಅಶೋಕ್ ಗಮನ ಸೆಳೆದಿದ್ದರು. ಇದೀಗ ಏಷ್ಯನ್ ಗೇಮ್ಸ್‌ನಲ್ಲಿ ದಾಖಲೆಯ ಗೋಲು ಬರೆದಿದ್ದಾರೆ.