ಬೆಂಗಳೂರು: ವಿಧಾನಸಭೆಯ ಮುಂಗಾರು ಅಧಿವೇಶನ ಇಂದಿನಿಂದ ಶುರುವಾಗಿದೆ. ಅಸೆಂಬ್ಲಿ ಸ್ಪೀಕರ್ ಯುಟಿ ಖಾದರ್ ಅವರು ಸದನದಲ್ಲಿ ಸದಸ್ಯರಿಗೆ ಸಂವಿಧಾನದ ಪ್ರಸ್ತಾವನೆ ಬೋಧಿಸಿದ ನಂತರ ಅಗಲಿದ ಗಣ್ಯರಿಗೆ ಸಂತಾಪ ಸಲ್ಲಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖ್ಯಾತ ನಿರ್ಮಾಪಕ–ನಿರ್ದೇಶಕ, ನಟ ದ್ವಾರಕೀಶ್ ಮತ್ತು ಕಳೆದ ಗುರುವಾರ ಲಂಗ್ ಕ್ಯಾನ್ಸರ್ ಗೆ ಬಲಿಯಾದ ನಟಿ–ನಿರೂಪಕಿ ಅಪರ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಚಿಕ್ಕಮಗಳೂರಿನಲ್ಲಿ ಜನಿಸಿದ ಅಪರ್ಣ ಅಪಾರ ಮತ್ತು ಬಹುಮುಖ ಪ್ರತಿಭೆಯ ಕಲಾವಿದೆಯಾಗಿದ್ದರು. ಪುಟ್ಣಣ್ಣ ಕಣಗಾಲ್ ನಿರ್ದೇಶನದ ‘ಮಸಣದ ಹೂ’ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದ ಅವರು ಒಬ್ಬ ನಿರೂಪಕಿಯಾಗಿ ಮಾಡಿದ ಸಾಧನೆ ದೊಡ್ಡದು. ಶುದ್ಧ ಕನ್ನಡವನ್ನು ಅರಳು ಹುರಿದಂತೆ ಮಾತಾಡುತ್ತಿದ್ದ ಅಪರ್ಣ ಅವರಂಥ ನಿರೂಪಕಿ ಮತ್ತೊಬ್ಬರು ಸಿಗಲಾರರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.