ಮೈಸೂರು: ಸರ್ಕಾರದ ಜತೆಗೆ ಸಂಘ-ಸಂಸ್ಥೆಗಳು ನೊಂದವರಿಗೆ ನೆರವಿನ ಸಹಾಯ ಹಸ್ತ ಚಾಚಬೇಕು ಎಂದು ವಿಜಯವಾಣಿ ದಿನ ಪತ್ರಿಕೆ ಮೈಸೂರು ಬ್ಯೂರೋ ಮುಖ್ಯಸ್ಥ ಎಂ.ಆರ್. ಸತ್ಯನಾರಾಯಣ ಹೇಳಿದರು.
ಜೆಸಿಐ ಮೈಸೂರು ಕಿಂಗ್‌ನಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಐದನೇ ವರ್ಷದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಮಾಜದಲ್ಲಿ ಅಸಹಾಯಕರು, ನೊಂದವರು ಬಹಳಷ್ಟು ಮಂದಿ ಇದ್ದಾರೆ. ಅವರಿಗೆ ಸರ್ಕಾರ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಆದರೂ ಸಾಕಷ್ಟು ಜನರಿಗೆ ನೆರವು ದೊರೆಯುತ್ತಿಲ್ಲ. ಅಂತಹವರನ್ನು ಸಂಘ-ಸಂಸ್ಥೆಗಳು ಗುರುತಿಸಿ ನೆರವು ನೀಡಿದಾಗ ಸೇವಾ ಕಾರ್ಯಗಳು ಸಾರ್ಧಕತೆ ಪಡೆದುಕೊಳ್ಳುತ್ತವೆ ಎಂದು ಹೇಳಿದರು.
ನಮ್ಮ ದೇಶದಲ್ಲಿ ನಾಯಕತ್ವ ಕೊರತೆ ಇಲ್ಲ. ಆದರೆ ನಾಯಕತ್ವಕ್ಕೆ ಇರುವ ಚೌಕಟ್ಟು ತಿಳಿಯದೆ ಎಷ್ಟೋ ಜನರು ಸೂಕ್ತ ರೀತಿಯಲ್ಲಿ ಹೊರ ಹೊಮ್ಮುತ್ತಿಲ್ಲ. ಹಾಗಾಗಿ ಜೆಸಿಐ ನಂತಹ ಸಂಘಟನೆಗಳು ಉತ್ತಮ ನಾಯಕತ್ವ ಬೆಳೆಸುವ ನಿಟ್ಟಿನಲ್ಲಿ ವೇದಿಕೆಯಾಗಿವೆ. ಮಹಿಳಾ ದಿನಾಚರಣೆಯಂದು ಅಧ್ಯಕ್ಷೆಯಾಗಿ ಸಹನಾಗೌಡ ಅಧಿಕಾರ ವಹಿಸಿಕೊಳ್ಳುತ್ತಿರುವುದಕ್ಕೆ ಅಭಿನಂದನೆಗಳು ಎಂದರು.
ಜೆಸಿಐ ಮಾಜಿ ರಾಷ್ಟ್ರೀಯ ನಿರ್ದೇಶಕ ಟಿ.ಎನ್.ದೇವರಾಜ್ ಮಾತನಾಡಿ, ಜೆಸಿಐ ಕೇವಲ ವ್ಯವಹಾರಿಕ ಸಂಸ್ಥೆಯಾಗಿರದೆ ಯುವ ಜನರಲ್ಲಿ ನಾಯಕತ್ವ ಗುಣ ಬೆಳೆಸುತ್ತದೆ. ಅಲ್ಲದೆ ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಿದೆ. ಆತ್ಮವಿಶ್ವಾಸ ಬೆಳೆಸಲು ಇಂತಹ ಈ ಸಂಸ್ಥೆ ನೆರವಾಗಿದ್ದು, 125 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಜೆಸಿಐ ವಲಯ 14ರ ಅಧ್ಯಕ್ಷ ವಿಜಯ್‌ಕುಮಾರ, ‘ಬಿ’ ಪ್ರದೇಶದ ಉಪಾಧ್ಯಕ್ಷ ಜಗದೀಶ್,JAC ರಾಷ್ಟ್ರೀಯ ಉಪಾಧ್ಯಕ್ಷ 2024 ಕುಮಾರ್ ಕೆ.ಎಸ್,JJ ಪಬ್ಲಿಕೇಶನ್ JCI ಭಾರತಕ್ಕೆ ರಾಷ್ಟ್ರೀಯ ಸಂಯೋಜಕಿಯಾದ ಜೆಎಫ್‌ಎ ರಶ್ಮಿ ಎಂ, ನಿರ್ಗಮಿತ ಅಧ್ಯಕ್ಷ ಮೋಹನ್ ರಾಚಯ್ಯ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿಕಲಚೇತನರಿಗಾಗಿ ಕಾರ್ಯ ನಿರ್ವಹಿಸುತ್ತಿರುವ ವಿಕಲಚೇತನ ಮಹೇಶ್ ಶರ್ಮಾ ಅವರನ್ನು ಸನ್ಮಾನಿಸಲಾಯಿತು. 2025ನೇ ಸಾಲಿನ ಅಧ್ಯಕ್ಷರಾಗಿ ಸಹನಾಗೌಡ, ಕಾರ್ಯದರ್ಶಿಯಾಗಿ ಎಚ್. ಎಸ್.ವಿನೋದ್ ರಾಶಿಂಕರ್, ಖಜಾಂಚಿಯಾಗಿ ಜಿತಿನ್ ಫ್ರೆಡ್ರಿಕ್, ಪದಾಧಿಕಾರಿಗಳಾದ ಸಾಧಿಕ್, ಶ್ರುತಿ, ವಿ.ಎಂ.ಮನೋಹರ್, ಆರ್ .ಪುರುಷೋತ್ತಮ್, ಎಚ್.ಜಿ.ವಿಠಲ್, ಎಲ್.ಗೌತಮ್, ಶ್ರೇಯಾ, ಮನೀಶ್, ಇತರರು ಅಧಿಕಾರ ಸ್ವೀಕರಿಸಿದರು.