ವಾಷಿಂಗ್ಟನ್: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿರುವ ಭಾರತ ಮೂಲದ ಸುನೀತಾ ವಿಲಿಯಮ್ಸ್ ಸೇರಿದಂತೆ ಅಮೆರಿಕದ ಗಗನಯಾತ್ರಿಗಳ ಜೋಡಿಯನ್ನು ಮಂಗಳವಾರ ಸಂಜೆ ಭೂಮಿಗೆ ಕರೆ ತರಲಾಗುವುದು ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತಿಳಿಸಿದೆ.
ಬುಧವಾರ ಇಲ್ಲವೇ ಗುರುವಾರ ಗಗನ ಯಾತ್ರಿಗಳು ಮರಳುವ ನಿರೀಕ್ಷೆಯಿತ್ತಾದರೂ ನಿಗದಿಗಿಂತ ಮೊದಲೇ ಮರಳುವರು ಎನ್ನುವ ಮಾಹಿತಿ ಲಭಿಸಿದೆ. ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರನ್ನು ಮತ್ತೊಬ್ಬ ಅಮೇರಿಕನ್ ಗಗನಯಾತ್ರಿ ಮತ್ತು ರಷ್ಯಾದ ಗಗನಯಾತ್ರಿಯೊಂದಿಗೆ ಭಾನುವಾರ ಮುಂಜಾನೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಬಂದಿರುವ ಸ್ಪೇಸ್ ಎಕ್ಸ್ ಡ್ರ್ಯಾಗನ್ ಕ್ರಾಫ್ಟ್‌ನಲ್ಲಿ ಭೂಮಿಗೆ ಕರೆ ತರಲಾಗುವುದು. ಬಹುತೇಕ ಅಮೆರಿಕದ ಸಮಯದ ಪ್ರಕಾರ ಮಂಗಳವಾರ ಸಂಜೆಯೇ ಮರು ವಾಪಸಾಗುವರು ಎಂದು ತಿಳಿಸಲಾಗಿದೆ. ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯು ತನ್ನ ಮೊದಲ ಸಿಬ್ಬಂದಿಯೊಂದಿಗೆ ಪರೀಕ್ಷಿಸುತ್ತಿದ್ದಾಗ ತಾಂತ್ರಿಕ ಸಮಸ್ಯೆಗಳನ್ನು ಅನುಭವಿಸಿತು.
ಅವುಗಳನ್ನು ಭೂಮಿಗೆ ಹಿಂತಿರುಗಿಸಲು ಅನರ್ಹವೆಂದು ಪರಿಗಣಿಸಲಾದ ನಂತರ ಸಿಕ್ಕಿಬಿದ್ದ ಗಗನಯಾತ್ರಿ ಜೋಡಿ ಜೂನ್‌ನಿಂದ ಅಂದರೆ ಸುಮಾರು ಒಂಬತ್ತು ತಿಂಗಳಿನಿಂದ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣನಲ್ಲಿದೆ. ಅವರನ್ನು ವಾಪಸ್ ಕರೆತರುವ ಪ್ರಯತ್ನ ನಿರಂತರವಾಗಿ ನಡೆದು ಈಗ ದಿನಾಂಕ ಅಂತಿಮಗೊಂಡಿದೆ.